ಹೈದರಾಬಾದ್: ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವು ಸಮಾನ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಉವೈಸಿ ಹೇಳಿದ್ದಾರೆ. ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಗೆ ಹೋಲಿಸಬಹುದು ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಗೆ ಬಾಬರಿ ಮಸ್ಜಿದ್ ಧ್ವಂಸದಲ್ಲಿ ಕಾಂಗ್ರೆಸ್ ಪಾತ್ರದ ಕುರಿತು ಚರ್ಚೆ ಹುಟ್ಟುಹಾಕಿದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಇತ್ತೀಚಿನ ಹೇಳಿಕೆಯ ನಂತರ ಉವೈಸಿ ಪ್ರತಿಕ್ರಿಯೆ ನೀಡಿದ್ದಾರೆ.
ಹೈದರಾಬಾದ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಹೇಳುತ್ತಲೇ ಬಂದಿದ್ದೇನೆ, ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್ ಎಸ್ಎಸ್ ನಷ್ಟೇ ಕಾಂಗ್ರೆಸ್ ಪಾಲಿದೆ. ಬಾಬರಿ ಮಸ್ಜಿದ್ ಧ್ವಂಸಕ್ಕೆ ಕಾಂಗ್ರೆಸ್ ಸಮಾನ ಹೊಣೆಗಾರಿಕೆ ಎಂಬುದು ಕಮಲ್ ನಾಥ್ ಹೇಳಿಕೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಕಮಲ್ ನಾಥ್ ಇತ್ತೀಚೆಗೆ, 1986ರಲ್ಲಿ ರಾಜೀವ್ ಗಾಂಧಿ ಅವರು ಮಸೀದಿ ಬೀಗ ತೆರೆಸಿದ್ದರು. ಇತಿಹಾಸವನ್ನು ಯಾರೂ ಮರೆಯಬಾರದು ಎಂದಿದ್ದರು.