ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ: ಫಝಲುಲ್ಲಾ ಬೆಂಗಳೂರು

Prasthutha|

ಬೆಂಗಳೂರು: ಇಂಧನ ಇತ್ಯಾದಿ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಕೇಂದ್ರ ಮತ್ತು ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ. ನಿಯಂತ್ರಣ ಇಲ್ಲದೆ ಇಂಧನ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದುಡಿಯುವ ಕಾರ್ಮಿಕರ ಸಂಪಾದನೆಯನ್ನು ಯಾವುದೇ ಕಾರಣಕ್ಕೂ ಉಳಿತಾಯವಾಗದಂತೆ ಜನಸಾಮಾನ್ಯರ ಬದುಕಿನ ಮೇಲೆ ಗಧಾಪ್ರಹಾರ ನಡೆಸುವ ಮೂಲಕ ಬಡ ಮಧ್ಯಮ ವರ್ಗದ ಜನರ ಬದುಕಿಗೆ ಗಾಯದ ಮೇಲೆ ಬರೆ ಎಳೆಯುವ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ, ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯಾದ್ಯಕ್ಷ ಫಝಲುಲ್ಲಾ ಬೆಂಗಳೂರು ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು ಜೀವನೋಪಾಯಕ್ಕಾಗಿರುವ ಪ್ರತಿಯೊಂದು ವಸ್ತುಗಳ ಮೇಲೆ ಅಪರಿಮಿತ ತೆರಿಗೆ ವಿಧಿಸಿ ವಿಪರೀತ ಬೆಲೆ ಏರಿಕೆ ಮಾಡಿ ಜನರ ಜೀವನದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ. ಇದರೊಂದಿಗೆ ಬಹಳ ಕಷ್ಟಪಟ್ಟು ಜೀವನ ಸಾಗಿಸುವ ಆಟೋ ಚಾಲಕರಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುವ ಸರ್ಕಾರದ ನೀತಿಯು ಖಂಡನಾರ್ಹ. ಈ ಮಧ್ಯೆ  ಸದ್ದಿಲ್ಲದೆ ಒಂದೇ ತಿಂಗಳಲ್ಲಿ ಎರಡು ಮೂರು ಬಾರಿ ಆಟೋ ಎಲ್ಪಿಜಿ ಗ್ಯಾಸ್’ನ ಬೆಲೆಯನ್ನು  ಏರಿಸುತ್ತಾ ಮತ್ತೊಮ್ಮೆ ವಾಹನ ಮತ್ತು ಆಟೋ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ.

64.26 ರೂ.ಇದ್ದ ಆಟೋ ಗ್ಯಾಸ್ ಬೆಲೆ ಇದೀಗ 67.75ರೂ ರೂಪಾಯಿಗೆ ಏರಿಕೆಯಾಗಿದೆ. ಯಾವುದೇ ಪೂರ್ವ ಪರ ಮಾಹಿತಿಯನ್ನು ನೀಡದೆ, ಏಕಾಏಕಿ ಸಾರ್ವಜನಿಕವಾಗಿ  ಪ್ರಕಟಣೆಯನ್ನು ನೀಡದೆ ಈ ರೀತಿಯಾಗಿ ನಿರಂತರ ಬೆಲೆಯಲ್ಲಿ  ಏರಿಕೆ ಮಾಡುವುದು  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ  ಹಗಲು ದರೋಡೆ ಮಾಡುವ ಅವಕಾಶವನ್ನು ಖಾಸಗಿಯವರಿಗೆ ವಹಿಸಿದೆ.

- Advertisement -

ಕರ್ನಾಟಕದಾಧ್ಯಂತ ಅಂದಾಜು 10 ಲಕ್ಷ ಆಟೋರಿಕ್ಷಾ ಚಾಲಕರು ತಮ್ಮ ದುಡಿಮೆಯ ಮೂಲಕ ಸಂಸಾರವನ್ನು ನಡೆಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿಬಭಾಯಿಸುತ್ತಿದ್ದು, ಸ್ವಾಭಿಮಾನದಿಂದ ದುಡಿಯುವ ಶ್ರಮಿಕರ ಸಂಕಷ್ಟ ಮತ್ತು ಭವಣೆಯನ್ನು ಅರಿಯದೆ ಸರ್ಕಾರ ವಿಪರೀತ ಬೆಲೆ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರ ಬದುಕಿಗೆ ಬರೆ ಎಳೆಯುತ್ತಿದೆ,

ಮಾತ್ರವಲ್ಲ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿ ತೊಡಕಾಗುತ್ತಿದ್ದು ಗುಂಡಿ ತುಂಬಿದ ರಸ್ತೆಗಳಲ್ಲಿ ದಿನಂಪ್ರತಿ ಓಡಾಟ ನಡೆಸುವ ಆಟೋಗಳನ್ನು ಗ್ಯಾರೇಜಿನಲ್ಲಿ ಇಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ರಸ್ತೆ ಗುಂಡಿಗಳ ಕಾರಣದಿಂದ ವಾಹನವನ್ನು ಗ್ಯಾರೇಜ್ ನಲ್ಲಿಡುವ ಅನಿವಾರ್ಯತೆಯಿಂದ ಗ್ಯಾರೇಜ್ ನಲ್ಲಿ ವಾಹನದ ಬಿಡಿ ಭಾಗಗಳನ್ನು ಖರೀದಿಸುವ ವೇಳೆಯಲ್ಲಿಯೂ ಬೆಲೆ ಏರಿಕೆಯ ಸಂಕಷ್ಟ ಎದುರಾಗುತ್ತದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜೊತೆಯಲ್ಲಿ ಸರಕಾರ ಸದ್ದಿಲ್ಲದೆ ಗ್ಯಾಸ್ ಬೆಲೆಯನ್ನು  ಏರಿಸಿ ಮತ್ತೊಮ್ಮೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವ ಸರ್ಕಾರದ ನೀತಿಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ  ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ  ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ದಿಢೀರನೆ ಏರಿಸಿದ ಆಟೋ ಎಲ್ಪಿಜಿ ಬೆಲೆ, ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಸರಕಾರವನ್ನು ಆಗ್ರಹಿಸಿ ರಾಜ್ಯದಾಧ್ಯಂತ ಆಟೋ ಚಾಲಕರು ಮತ್ತು ಜನಸಾಮಾನ್ಯರ ಪರವಾಗಿ ಪರಿಣಾಮಕಾರಿಯಾಗಿ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲು SDTU ರಾಜ್ಯ ಸಮಿತಿಯಿಂದ ಕರೆ ನೀಡಲಾಗಿದೆ.



Join Whatsapp