ಡ್ರಗ್ಸ್ ವಿರುದ್ಧ ಜಾಗೃತಿ: ಮಂಗಳೂರಿನಲ್ಲಿ ಬೀದಿಗಿಳಿದ ಸಾವಿರಾರು ವಿದ್ಯಾರ್ಥಿಗಳು

Prasthutha|

ಮಂಗಳೂರು: ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಬೀದಿಗಿಳಿದು ಜನಜಾಗೃತಿ ಮೂಡಿಸಿದ್ದಾರೆ.

- Advertisement -

ಮಾದಕ ಪದಾರ್ಥ ಸೇವನೆ ವ್ಯಸನದ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್‌ ವತಿಯಿಂದ ಇಲ್ಲಿ ಏರ್ಪಡಿಸಿದ್ದ ‘ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್’ ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಿದ ಕಾರ್ಯಕ್ರಮದ ಭಾಗವಾಗಿತ್ತು ಇದು.

ಮಾದಕ ಪದಾರ್ಥಗಳ ಸೇವನೆ ಚಟದಿಂದ ಎದುರಾಗುವ ಸಮಸ್ಯೆಗಳ ಕರಾಳತೆ ಬಿಂಬಿಸುವ ಫಲಕಗಳನ್ನು ಕೈಯಲ್ಲಿ ಹಿಡಿದ ವಿದ್ಯಾರ್ಥಿಗಳು ಬಿಳಿ ಟೋಪಿ ಧರಿಸಿ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಡ್ರಗ್ಸ್‌ನಿಂದ ಬದುಕು ಹೇಗೆ ಭಯಾನಕವಾಗುತ್ತದೆ ಎಂಬುದನ್ನು ಬಿಂಬಿಸಲು ಕೆಲವು ವಿದ್ಯಾರ್ಥಿಗಳು ತಲೆ ಬುರುಡೆಯನ್ನು ಹೋಲುವ ಮುಖವಾಡಗಳನ್ನು ಧರಿಸಿದ್ದರು. ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ಸಂದೇಶ ಫಲಕಗಳು ಡ್ರಗ್ಸ್‌ ಹಾವಳಿಯ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಬಿಂಬಿಸಿದ್ದವು. ಕೆಲವು ವಿದ್ಯಾರ್ಥಿಗಳು ಕರಪತ್ರಗಳನ್ನು ಹಂಚಿದರು.

- Advertisement -

120ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಯುನಿಫಾರ್ಮಲ್ಲಿ ವಾಕಥಾನ್‌ನಲ್ಲಿ ಹೆಜ್ಜೆಹಾಕಿದರು. ಪುರಭವನದಿಂದ ಹೊರಟು ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್, ಲಾಲ್‌ಭಾಗ್, ಲೇಡಿಹಿಲ್, ನಾರಾಯಣ ಗುರು ವೃತ್ತ ಮಾರ್ಗವಾಗಿ ಮಂಗಳ ಕ್ರೀಡಾಂಗಣದವರೆಗೆ ಸಾಗಿತು.

ವಾಕಥಾನ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮ ಸ್ನೇಹಿತರು ಇಂತಹ ವ್ಯಸನದಲ್ಲಿ ತೊಡಗಿದ್ದರೆ, ಅವರಿಗೆ ಬುದ್ಧಿ ಹೇಳಿ, ಸರಿದಾರಿಗೆ ತನ್ನಿ. ಪ್ರೀತಿ ಸೌಹಾರ್ದದಿಂದ ಕೂಡಿದ ಆರೋಗ್ಯಕರ ಸಮಾಜ ಕಟ್ಟುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ಸಚಿವರು ಹೇಳಿದರು.



Join Whatsapp