ಮಂಗಳೂರು : ಗುರುಪುರ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆ ಪ್ರಕ್ರಿಯೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಯಶವಂತ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ದಿಲ್ಸಾದ್ ಬಾನು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಶ್ರಫ್ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ಬೆಂಬಲಿತ ಬಂಡಾಯ ಅಭ್ಯರ್ಥಿಯಾಗಿ ಯಶವಂತ ಶೆಟ್ಟಿಯವರೂ ನಾಮಪತ್ರ ಸಲ್ಲಿಸಿದ್ದರು. ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳ ನೆರವಿನೊಂದಿಗೆ ಯಶವಂತ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾದರು.
ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 28 ಸದಸ್ಯ ಬಲವಿದ್ದು, ಕಾಂಗ್ರೆಸ್ ಬೆಂಬಲಿತರು 12, ಎಸ್ ಡಿಪಿಐ ಬೆಂಬಲಿತರು 9, ಬಿಜೆಪಿ ಬೆಂಬಲಿತರು 6 ಸ್ಥಾನಗಳಲ್ಲಿ ಗೆದ್ದಿದ್ದರು. ಒಬ್ಬರು ಸ್ವತಂತ್ರವಾಗಿ ಗೆದ್ದಿದ್ದರು.
ಉಪಾಧ್ಯಕ್ಷೆ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಶೋಭಾ ಸ್ಪರ್ಧಿಸಿದ್ದರು. ಬಿಜೆಪಿ ಬೆಂಬಲಿತರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹರೀಶ್ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ನಳಿನಿ ಸ್ಪರ್ಧಿಸಿದ್ದರು.