ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದು ಯುವಕ ಮರಣ

Prasthutha|

- Advertisement -

ಕೋಟ: ಸಿಡಿಲು ಬಡಿಯುತ್ತಿರುವ ಸಮಯದಲ್ಲಿ ಪೋನ್ ನಲ್ಲಿ ಮಾತನಾಡಿದ ಯುವಕನಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ಆವರ್ಸೆ ಸಮೀಪ ಕಿರಾಡಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಪ್ರಮೋದ್ ಶೆಟ್ಟಿ ( 24) ಮೃತ ಯುವಕ. ಕಿರಾಡಿ ಹಂಚಿನಮನೆ ನಿವಾಸಿ, ಬಾಬಣ್ಣ ಶೆಟ್ಟಿ ಹಾಗೂ ಬೇಬಿ ಶೆಡ್ತಿಯವರ ಮೂರು ಗಂಡು ಮಕ್ಕಳಲ್ಲಿ ಒಬ್ಬರು.

ಮಿಂಚು, ಸಿಡಿಲು ಅಬ್ಬರಿಸುತ್ತಿರುವಾಗಲೇ ಮನೆಯ ಹೊರೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಗಂಭೀರವಾಗಿ ಗಾಯಗೊಂಡ ಪ್ರಮೋದ್‌ನನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

- Advertisement -

ಪ್ರಮೋದ್ ಬಡ ಕುಟುಂಬದವನಾಗಿದ್ದು, ಶಿಕ್ಷಣ ಮುಗಿಸಿ ಬ್ರಹ್ಮಾವರದ ಬಟ್ಟೆಯಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಸೌಮ್ಯ ಸ್ವಭಾವದರಾಗಿದ್ದ ಇವರು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು.

ರವಿವಾರ ಸಂಜೆ ವೇಳೆಗೆ ಮಳೆಯ ವಾತವಾರಣ ನಿರ್ಮಾಣವಾಗಿದ್ದು, ಯಾವುದೇ ಮುನ್ಸೂಚನೆ ಇಲ್ಲದೆ ಗುಡುಗು, ಸಿಡಿಲು ಆರ್ಭಟಿಸಿದೆ. ಈ ಸಂದರ್ಭ ಅಪಾಯದ ಮುನ್ಸೂಚನೆ ಅರಿಯದೆ ಪೋನ್ ನಲ್ಲಿ ಮಾತನಾಡುತ್ತಿದ್ದ ಪ್ರಮೋದ್ ಬಲಿಯಾಗಿದ್ದು ದುರ್ಘಟನೆಯಿಂದ ಸ್ಥಳೀಯರು ಗಾಬರಿಗೊಳಗಾಗಿದ್ದು, ಮನೆಯವರು ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಸಿಡಿಲು ಇರುವಾಗ ಫೋನ್ ಬಳಸದೇ ಇರಲು ಇಂತಹ ದುರಂತವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದಾಗಿದೆ.



Join Whatsapp