ಮೀನಿನ ಮರಿ ಹಿಡಿಯಲು ಹೋದ ಅಣ್ಣ-ತಮ್ಮ ಬಾಲಕರು ಮೃತ್ಯು

Prasthutha|

- Advertisement -

ಬೆಂಗಳೂರು: ಮೀನಿನ ಮರಿ ಹಿಡಿಯಲು ಹೋಗಿ ಅಣ್ಣ ತಮ್ಮ ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬನ್ನೇರು ಘಟ್ಟ ರಸ್ತೆಯ ಸ್ವಾಗತ್ ಜಂಕ್ಷನ್ ಬಳಿ ನಡೆದಿದೆ. ಸಹೋದರರು ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ನಲ್ಲಿದ್ದ ನೀರಿನಲ್ಲಿ ಮೀನಿ ಮರಿಗಳಿವೆ ಎಂದು ಹಿಡಿಯಲು ಹೋಗಿದ್ದರು.

ತಿಲಕ್‌ನಗರದ 9 ವರ್ಷ ವಯಸ್ಸಿ‌ನ ನಸರುಲ್ಲಾ ಖಾನ್ ಹಾಗೂ ಆತನ ತಮ್ಮ 7 ವರ್ಷದ ಅಮೀನ್ ಖಾನ್ ಮೃತರು. ಆಟೊ ಚಾಲಕ ಅಝ್ಗರ್ ಖಾನ್ ಪುತ್ರರು.

- Advertisement -

ಮಕ್ಕಳಾದ ನಸರುಲ್ಲಾ ಖಾನ್ ಹಾಗೂ ಅಮೀನ್ ಖಾನ್ ನಿಂತ ನೀರಿನಲ್ಲಿರುತ್ತಿದ್ದ ಮೀನಿನ ಮರಿಗಳನ್ನು ಆಗಾಗ ಹಿಡಿಯುತ್ತಿದ್ದರು. ಬಿ.ಜಿ. ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡ ವ್ಯಾಜ್ಯದಿಂದಾಗಿ ಹಲವು ವರ್ಷಗಳಿಂದ ಪಾಳು ಬಿದ್ದಿದೆ. ಅದರ ಬೇಸ್‌ಮೆಂಟ್‌ನಲ್ಲಿ 10 ಅಡಿಗಿಂತಲೂ ಹೆಚ್ಚು ನೀರಿದೆ. ಅದರಲ್ಲಿದ್ದ ಮೀನಿನ ಮರಿಗಳನ್ನು ಹಿಡಿಯಲು ಅಣ್ಣ- ತಮ್ಮ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನೀರಿನಲ್ಲಿ ಪಾಚಿ ಹೆಚ್ಚಾಗಿತ್ತು. ಮೀನಿನ ಮರಿ ಹಿಡಿಯುವ ಸಂದರ್ಭದಲ್ಲಿ ಅಣ್ಣ-ತಮ್ಮ ಇಬ್ಬರೂ ನೀರಿನಲ್ಲಿ ಬಿದ್ದಿದ್ದರು. ಅಲ್ಲಿಯೇ ಮುಳುಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದೂ ಪೊಲೀಸರು ಹೇಳಿದ್ದಾರೆ.

ಮನೆಯಿಂದ ಹೊರಗೆ ಹೋಗಿದ್ದ ಮಕ್ಕಳು ವಾಪಸು ಬಂದಿರಲಿಲ್ಲ. ಆತಂಕಗೊಂಡಿದ್ದ ಪೋಷಕರು ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಕ್ಕಳಿಗೆ ಮೀನಿನ ಮರಿ ಹಿಡಿಯುವ ಹವ್ಯಾಸವಿತ್ತೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ನೀರು ಸಂಗ್ರಹವಿದ್ದ ಕಡೆ ಶೋಧ ನಡೆಸಿದ್ದಾರೆ. ಹಾಗೆ ಬಿ.ಜಿ. ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ ಬಳಿ ಹೋದಾಗ ನೀರಿನಲ್ಲಿ ಮೃತದೇಹಗಳು ತೇಲುತ್ತಿದ್ದವು ಎಂದು ಪೊಲೀಸ್ ಮೂಲಗಳು ಹೇಳಿವೆ.



Join Whatsapp