►ಗೋಪ್ಯತೆಯ ಸಬೂಬು ಹೇಳಿ ಕೇಂದ್ರ ಸರಕಾರ ಕೈ ಚೆಲ್ಲಿ ಕುಳಿತುಕೊಳ್ಳಬಾರದು
ಬೆಂಗಳೂರು: ಬೇಹುಗಾರಿಕೆ ಆರೋಪದಡಿಯಲ್ಲಿ ಗಲ್ಲು ಶಿಕ್ಷೆಗೊಳಗಾದ ಭಾರತೀಯ ನೌಕಾಪಡೆಯ ಸಿಬ್ಬಂದಿ 1 ವರ್ಷದಿಂದ ಕತಾರ್ ಜೈಲಿನಲ್ಲಿದ್ದಾರೆ. ಹಾಗಿರುವಾಗ ಕೇಂದ್ರ ಸರ್ಕಾರ ಈವರೆಗೆ ಏನು ಮಾಡುತ್ತಿತ್ತು? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಅವರು ಎಕ್ಸ್ ಮಾಡಿದ್ದು, ಭಾರತದ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳಿಗೆ ಕತಾರ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವುದು ಆಘಾತಕಾರಿ ಸುದ್ದಿ. ಆದರೆ ಗೋಪ್ಯತೆಯ ಕಾರಣ ನೀಡಿ ಕೇಂದ್ರ ಸರ್ಕಾರ ಇದೊಂದು ಸಾಮಾನ್ಯ ಪ್ರಕರಣ ಎಂದು ತೇಪೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತದ ನೌಕಪಡೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ ವಿದೇಶಿ ನ್ಯಾಯಾಲಯ ಮರಣ ದಂಡನೆ ವಿಧಿಸಿರುವುದು ಸಾಮಾನ್ಯ ಪ್ರಕರಣವೇ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
ಭಾರತದ ನೌಕಾಪಡೆಯ ಸಿಬ್ಬಂದಿಗೆ ಕತಾರ್ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯ ಕುರಿತು ಕೇವಲ ಪ್ರಾಥಮಿಕ ಮಾಹಿತಿಯಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಕೇಂದ್ರ ಸರ್ಕಾರದ ರಾಜತಾಂತ್ರಿಕ ವೈಫಲ್ಯವಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
ಗಲ್ಲು ಶಿಕ್ಷೆಗೊಳಗಾದ ನೌಕಾಪಡೆಯ ಸಿಬ್ಬಂದಿಗಳು ಕಳೆದ 1 ವರ್ಷದಿಂದ ಕತಾರ್ ಜೈಲಿನಲ್ಲಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಏನು ಮಾಡುತಿತ್ತು.? ನೌಕಾದಳದ 8 ಮಾಜಿ ಅಧಿಕಾರಿಗಳಿಗೆ ಕತಾರ್ ಮರಣ ದಂಡನೆ ವಿಧಿಸಿರುವುದು ಇಡೀ ದೇಶವೇ ಕಳವಳ ಪಡುವ ವಿಚಾರ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್-ಪ್ಯಾಲೆಸ್ಟೇನ್ ನಡುವಿನ ಸಂಘರ್ಷದ ಹೊತ್ತಿನಲ್ಲೇ ಈ ತೀರ್ಪು ಬಂದಿರುವುದು ಚಿಂತಿಸಬೇಕಾದ ವಿಚಾರ. ದೇಶಕ್ಕೆ ಸೇವೆ ಸಲ್ಲಿಸಿದವರು ವಿದೇಶಿ ನೆಲದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕತಾರ್ ನ್ಯಾಯಾಲಯದ ತೀರ್ಪಿನಿಂದ ಗಲ್ಲುಶಿಕ್ಷೆಗೆ ಗುರಿಯಾದ ನೌಕಾದಳದ ಸಿಬ್ಬಂದಿಗಳ ಕುಟುಂಬವಷ್ಟೇ ಅಲ್ಲ, ಇಡೀ ದೇಶವೇ ಆತಂಕಕ್ಕೀಡಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಗೋಪ್ಯತೆಯ ಸಬೂಬು ಹೇಳಿ ಕೈ ಚೆಲ್ಲಿ ಕುಳಿತರೆ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಾವೇ ಸ್ವತಃ ಕೈಯ್ಯಾರೆ ಬಲಿ ಕೊಟ್ಟಂತಾಗುತ್ತದೆ. ಹಾಗಾಗಿ ಕೇಂದ್ರ ಈ ಪ್ರಕರಣದ ಸೂಕ್ಷ್ಮತೆ ಅರಿತುಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ.