ಕೆ.ಆರ್.ಪುರ: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನವನ್ನು ಖಂಡಿಸಿ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘಟನೆಯ ಕಾರ್ಯಕರ್ತರು ವರ್ತೂರಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಂತೋಷ್ ಅಭಿಮಾನಿಗಳು, ಗ್ರಾಮಸ್ಥರು ಜೊತೆಯಾಗಿದ್ದರು.
ಹಳ್ಳಿಕಾರ್ ರಾಸುಗಳ ಸಂರಕ್ಷಣೆಯ ಮೂಲಕ ಗುರುತಿಸಿಕೊಂಡಿರುವ ಸಂತೋಷ್ ಅವರನ್ನು ಬಂಧಿಸಿರುವುದು ರೈತರಿಗೆ ಮಾಡುತ್ತಿರುವ ಅಪಮಾನ. ಎಫ್‌ಎಸ್‌ಎಲ್ ವರದಿ ಬಂದ ನಂತರವಷ್ಟೇ ಕ್ರಮ ಕೈಗೊಳ್ಳಬೇಕಾಗುತ್ತೆ. ಆದರೆ ಏಕಾಏಕಿ ಬಂಧಿಸಿರುವುದನ್ನು ನೋಡಿದರೆ ‘ಬಿಗ್ ಬಾಸ್’ನಲ್ಲಿ ಅವರು ಜನಪ್ರಿಯರಾಗುತ್ತಿರುವುದನ್ನು ಸಹಿಸದೇ ಅವರ ವಿರೋಧಿಗಳು ಪಿತೂರಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ತೂರ್ ಸಂತೋಷ್ ವಿರುದ್ಧ ಕಾನೂನು ಕ್ರಮ ಜರುಗಿಸಿದಷ್ಟು ವೇಗವಾಗಿ ದರ್ಶನ್, ಜಗ್ಗೇಶ್, ರಾಕ್ಲೈನ್ ವೆಂಕಟೇಶ್ ವಿರುದ್ಧ ನೀವು ಕ್ರಮ ಜರುಗಿಸಿಲ್ಲ? ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದರು ಎಂಬ ಆರೋಪವೂ ಇದೆ. ಅವರ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.