ಹುಲಿ ಉಗುರು: ಯಾರೇ ಪ್ರಭಾವಿಗಳಿದ್ದರೂ ಬಿಡಲ್ಲ ಎಂದ ಸಚಿವ ಈಶ್ವರ ಖಂಡ್ರೆ

Prasthutha|

ಕಲಬುರಗಿ: ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿ ವನ್ಯ ಪ್ರಾಣಿಗಳ ಚರ್ಮ, ದಂತ, ಕೊಂಬು ಸಂಗ್ರಹ ಅಥವಾ ಸಾಗಾಣಿಕೆಗೆ ಅವಕಾಶ ಇಲ್ಲ. ಅದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಯಾವುದೇ ಪ್ರಕರಣಗಳಲ್ಲಿ ಭಾಗಿಯಾದರೆ, ಅವರ ಹಿಂದೆ ಎಂತಹ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

- Advertisement -

ಇತ್ತೀಚೆಗೆ ಹುಲಿ ಉಗುರು ಧರಿಸಿರುವ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಲಬುರಗಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಹುಲಿ ಉಗುರು ಪದಕಗಳನ್ನು ಕೊರಳಲ್ಲಿ ಧರಿಸುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವರು ಹುಲಿ ಚರ್ಮಗಳನ್ನು ಮನೆಗಳಲ್ಲಿ ಶೇಖರಣೆ ಮಾಡುತ್ತಿರುವಂತಹ ದೂರುಗಳು ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ದೂರಿನ ಅನ್ವಯ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.

ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಎಂತಹ ದೊಡ್ಡವರು, ಪ್ರಭಾವಿಗಳೇ ಆದರೂ, ಅಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದೆ. ಯಾರ ವಿರುದ್ಧ ದೂರು ದಾಖಲಾಗಿವೆಯೋ ಅವರ ವಿರುದ್ಧ ಈಗಾಗಲೇ ತನಿಖೆ ಪ್ರಾರಂಭಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.



Join Whatsapp