ಕೋಲಾರ: ಜಿಲ್ಲೆಯಲ್ಲಿ ಬಿಜೆಪಿ ಸಂಸದ, ಕಾಂಗ್ರೆಸ್ ಶಾಸಕ ನಡುವೆ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿ ಕೋಲಾರ ಸಂಸದ ಮುನಿಸ್ವಾಮಿ, ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಪರಸ್ಪರ ದೂರು-ಪ್ರತಿ ದೂರು ದಾಖಲಿಸಿದ್ದಾರೆ.
ಕೋಲಾರದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ಮಧ್ಯೆ ಜಗಳ ನಡೆದಿತ್ತು. ಅಲ್ಲದೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಮುನಿಸ್ವಾಮಿ ಅವರು ದೂರು ನೀಡಿದ್ದರು. ಸದ್ಯ ಈಗ ಇಬ್ಬರ ವಿರುದ್ಧವೂ FIR ದಾಖಲಾಗಿದೆ.
ಕೋಲಾರ ಸಂಸದ ಹಾಗೂ ಶಾಸಕರು ಪರಸ್ಪರರ ಮೇಲೆ ದೂರು ದಾಖಲಿಸಿದ್ದಾರೆ. ಸಂಸದ ಮುನಿಸ್ವಾಮಿ, ನಾರಾಯಣಸ್ವಾಮಿ ದೂರು ಹಿನ್ನೆಲೆ ಇಬ್ಬರ ವಿರುದ್ಧವೂ FIR ದಾಖಲಾಗಿದೆ. ಶಾಸಕರ ವಿರುದ್ದ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ ದೂರು ಸಲ್ಲಿಸಿದ್ದು ಎಫ್ಐಆರ್ ದಾಖಲಾಗಿದೆ. ಬಂಗಾರಪೇಟೆ ಶಾಸಕರ ದೂರಿನ ಅನ್ವಯ ಸಂಸದನ ಮೇಲೆ FIR ದಾಖಲಾಗಿದೆ.
ಸೆ.25 ರಂದು ನಗರದ ರಂಗಮಂದಿರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸದ ಹಾಗೂ ಶಾಸಕರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಎಸ್ಪಿ ನಾರಾಯಣ್ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿತ್ತು.
ಸಂಸದ ಎಸ್.ಮುನಿಸ್ವಾಮಿ ಭೂಗಳ್ಳರನ್ನು ಅಕ್ಕ ಪಕ್ಕದಲ್ಲಿ ಕೂರಿಸಿಕೊಂಡು ಸಣ್ಣ ರೈತರಿಗೆ ಹೇಗೆ ನ್ಯಾಯ ಕೊಡಿಸುತ್ತೀರ ಎಂದು ಹೇಳಿದ ಮಾತು ರಂಪಾಟಕ್ಕೆ ಕಾರಣವಾಯಿತು. ಆಗ ನಿನ್ನನ್ನು ಇವತ್ತು ಮುಗಿಸುತ್ತೇನೆ ಎಂದು ಸಂಸದ ಮುನಿಸ್ವಾಮಿ ಹಲ್ಲೆಗೆ ಮುಂದಾಗಿದ್ದರು.
ಎಸ್ಪಿ ನಾರಾಯಣ ಅವರು ಪರಿಸ್ಥಿತಿ ಅರಿತು ಅನಾಹುತ ತಡೆದಿದ್ದರು. ಜಿಲ್ಲಾ ಮಂತ್ರಿ ಭೈರತೀ ಸುರೇಶ್ ಮಧ್ಯ ಪ್ರವೇಶಿಸಿ ಸಂಸದರಿಂದ ಆಗಬಹುದಾದಂತಹ ಮಾರಣಾಂತಿಕ ಹಲ್ಲೆಯನ್ನು ತಪ್ಪಿಸಿದ್ದರು. ಸಂಸದ ಮುನಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರು ಸಲ್ಲಿಸಿದ್ದು ದೂರಿನ ಅನ್ವಯ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.