ಮೈಸೂರು: ವಿಧಾನಸಭಾ ಚುನಾವಣೆಗೂ ಮುನ್ನ ವರುಣಾ ಕ್ಷೇತ್ರದ ಮಡಿವಾಳ ಸಮುದಾಯದವರಿಗೆ ಐರನ್ ಬಾಕ್ಸ್ ಮತ್ತು ಕುಕ್ಕರ್ಗಳನ್ನು ಹಂಚಿರುವುದಾಗಿ ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಇದರ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಇದೀಗ ಮೈಸೂರು ಬಿಜೆಪಿ ಘಟಕದಿಂದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಿದ್ದರಾಮಯ್ಯರವರು ಗೆಲುವಿಗಾಗಿ ಕ್ಷೇತ್ರದ ಮಡಿವಾಳ ಸಮುದಾಯದ ಮತದಾರರಿಗೆ ಅಡುಗೆ ಮಾಡುವ ಕುಕ್ಕರ್ ಮತ್ತು ಇಸ್ತ್ರಿ ಪೆಟ್ಟಿಗೆಗಳನ್ನು ಹಂಚಿದ್ದಾರೆ. ಇದರಿಂದ ಚುನಾವಣೆಯನ್ನು ಗೆದ್ದಿರುವುದರ ಬಗ್ಗೆ ಅವರ ಪುತ್ರ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮಡಿವಾಳ ಸಮಾಜದ ಉದ್ಘಾಟನಾ ಸಮಾರಂಭದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಕಾನೂನನ್ನು ಉಲ್ಲಂಘಿಸಿ ಮತದಾರರಿಗೆ ಆಮಿಷವನ್ನು ತೋರಿ ಮತವನ್ನು ತಮ್ಮ ಪಕ್ಷಕ್ಕೆ ಹಾಕಿಸಿಕೊಂಡಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಖರ್ಚು ವೆಚ್ಚವನ್ನು ಸಹ ಚುನಾವಣೆಯ ಲೆಕ್ಕದಲ್ಲಿ ತೋರಿಸಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್ ಸೇರಿ ಹಲವರು ಠಾಣೆಗೆ ತೆರಳಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ವಿರುದ್ಧ ದೂರು ನೀಡಿದ್ದಾರೆ.