ಜಾನ್ಸಿ: ಉತ್ತರಪ್ರದೇಶದ ಜಾನ್ಸಿ ರೈಲ್ವೆ ಕೋರ್ಟ್ ಗೆ ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮೂವರು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪರಾರಿಯಾದ ಆರೋಪಿಗಳನ್ನು ಬ್ರಿಜೇಂದ್ರ (27ವರ್ಷ), ಶೈಲೇಂದ್ರ (20ವರ್ಷ) ಹಾಗೂ ಜ್ಞಾನಪ್ರಸಾದ್ (23 ವರ್ಷ) ಎಂದು ಗುರುತಿಸಲಾಗಿದೆ.
ವಿಡಿಯೋದಲ್ಲೇನಿದೆ?
ಕೋರ್ಟ್ ಹೊರಭಾಗದಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಲಾಗಿತ್ತು. ಆದರೆ ಯಾವುದೇ ಭದ್ರತಾ ಸಿಬಂದಿ ಇಲ್ಲದಿರುವುದನ್ನು ಗಮನಿಸಿದ ಮೂವರು ಆರೋಪಿಗಳು ವ್ಯಾನ್ ನ ಬಾಗಿಲು ತೆರೆದು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂವರು ಆರೋಪಿಗಳು ವ್ಯಾನ್ ನ ಬಾಗಿಲು ತೆರೆದು ರಸ್ತೆಯಲ್ಲಿ ಓಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದ ಸಂದರ್ಭದಲ್ಲಿ ವ್ಯಾನ್ ನೊಳಗೆ ಒಟ್ಟು ಏಳು ಆರೋಪಿಗಳಿದ್ದರು. ಇದರಲ್ಲಿ ಮೂವರು ಆರೋಪಿಗಳು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.
ಏಳು ಜನ ಆರೋಪಿಗಳು, 11 ಪೊಲೀಸ್ ಅಧಿಕಾರಿಗಳು
11 ಜನ ಪೊಲೀಸ್ ಅಧಿಕಾರಿಗಳು ಒಟ್ಟು ಏಳು ಆರೋಪಿಗಳನ್ನು ಜಾನ್ಸಿ ರೈಲ್ವೆ ಕೋರ್ಟ್ ಗೆ ಹಾಜರುಪಡಿಸಲು ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ಯುತ್ತಿದ್ದರು. ಪರಾರಿಯಾಗಿರುವ ಮೂವರು ಆರೋಪಿಗಳ ವಿರುದ್ಧ ರೈಲ್ವೆ ನಿಲ್ದಾಣದಲ್ಲಿ ಮೊಬೈಲ್ ಕಳವುಗೈದ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 11 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ.