ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಂಗಳೂರಿನಲ್ಲಿ ತಮಿಳರು ಇದ್ದಾರೆ. ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೊಸೂರು ಮೂಲಕ ಕರೆಸಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮಿಳು ಚಿತ್ರ ಬಂದ್ ಮಾಡುತ್ತೇವೆ. ರಜನಿಕಾಂತ್ ಬೆಂಗಳೂರಿಗೆ ಬರಬಾರದು. ಕಾವೇರಿ ವಿಚಾರದಲ್ಲಿ ರಜನಿಕಾಂತ್ ಏನು ನಿರ್ಧಾರ ಮಾಡ್ತಾರೋ ಮಾಡಲಿ. ಕರ್ನಾಟಕದ ಪರ ನಿಲ್ತಾರಾ, ಅಲ್ಲ ತಮಿಳುನಾಡು ಪರ ನಿಲ್ತಾರಾ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ದಿಕ್ಕಿಲ್ಲದಂತೆ ಆಗಿದೆ. ಮುಖ್ಯಮಂತ್ರಿ ಏನು ನಿರ್ಧಾರ ಮಾಡ್ತಾರೆ ನೋಡೋಣ. ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ಕೊಟ್ಟು ನಿಮ್ಮ ಧೈರ್ಯ ತೋರಿಸಿ ಎಂದು ವಾಟಾಳ್ ಆಗ್ರಹಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತೇವೆ. ನಂತರ ಹೋರಾಟಕ್ಕೆ ನಿರ್ಧರಿಸುತ್ತೇವೆ. ಕಾವೇರಿ ನೀರು ಬಿಡಲೇಬೇಕಂದ್ರೆ ಬಂದ್ ಮಾಡಲು ಸಿದ್ಧರಿದ್ದೇವೆ. ನಟರು ಬರುತ್ತೇವೆಂದು ಹೇಳಿದ್ದಾರೆ, ನೋಡೋಣ ಯಾವ ರೀತಿ ಬರುತ್ತಾರೆಂದು. ನಮ್ಮ ಕನ್ನಡ ನಟರು ಎಲ್ಲೆಲ್ಲೋ ಇದ್ದಾರೆ, ಎಲ್ಲರೂ ಇಳಿದು ಕೆಳಗೆ ಬರಲಿ. ನಾಡಿನ ಪರ, ಕನ್ನಡ ಪರ, ರೈತರ ಪರ ಸ್ಯಾಂಡಲ್‌ವುಡ್ ನಟರು ಬರಲಿ. ಬರದಿದ್ದರೆ ಏನು ಮಾಡಬೇಕೋ ಮಾಡೋಣ. ಶಾಸಕರು ಮುದ್ದು ಮುದ್ದಾಗಿ ಮಾತಾಡಲು ವಿಧಾನಸೌಧಕ್ಕೆ ಬರುತ್ತಾರೆ. ಅವರೆಲ್ಲಾ ಯಾವ ತೀರ್ಮಾನ ಕೈಗೊಳ್ಳುತ್ತಾರೆಂದು ನೋಡೋಣ ಎಂದು ನಾಗರಾಜ್ ಹೇಳಿದ್ದಾರೆ.
ಕಾವೇರಿ ಹೋರಾಟ ಅಂದ್ರೆ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆ, ಕನ್ನಡಪರ ಸಂಘಟನೆಗಳು, ರೈತರು ಇಷ್ಟಕ್ಕೇ ಸೀಮಿತ ಆಗಬಾರದು. ಕಾವೇರಿ ಹೋರಾಟ ಅಂದ್ರೆ ರಾಜ್ಯದ ಎಲ್ಲಾ ರೈತರು, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಮಂಗಳೂರು ಹಾಗೂ ಬೆಂಗಳೂರಿನ ಪ್ರಶ್ನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಉತ್ತರ ಕರ್ನಾಟಕದ ಭಾಗದವರು ಕಾವೇರಿ ನದಿ ನಮ್ಮದಲ್ಲ ಅಂತಾರೆ. ಮಂಗಳೂರಿನವರು ಸಮುದ್ರ ಪಕ್ಕದವರು, ನಮಗಲ್ಲ ಅಂತಾರೆ. ಮಂಡ್ಯ, ಚಾಮರಾಜನಗರ, ಕನ್ನಡಪರ ಸಂಘಟನೆಗಳಿಂದ ಮಾತ್ರ ಹೋರಾಟ ನಡೆಯುತ್ತಿದೆ. ಕಾವೇರಿ ಹೋರಾಟದಲ್ಲಿ ಬೆಂಗಳೂರಿನವರು ಬಹಳ ಮಂದಗತಿಯಲ್ಲಿದ್ದಾರೆ. ಮೊದಲು ಬೆಂಗಳೂರು ನಗರದಲ್ಲಿ ಶುರುವಾಗಿದ್ದು ತಮಿಳರ ದರ್ಬಾರು. ಬಳಿಕ ಮಾರ್ವಾಡಿ, ಸಿಂಧಿಗಳು, ವಿದೇಶದಿಂದ ಬಂದವರದ್ದು ದರ್ಬಾರು. ಇವರು ಯಾರಿಗೂ ಕನ್ನಡಿಗರ ಪರಿಸ್ಥಿತಿ ಅರ್ಥ ಆಗುತ್ತಿಲ್ಲ. ಬೆಂಗಳೂರಿಗೆ ಬರುವ ನೀರು ಒಂದು ದಿನ ಬರದಿದ್ರೆ ಕಷ್ಟ ಗೊತ್ತಾಗುತ್ತದೆ. ಬೆಂಗಳೂರಿನ ಜನರಿಗೆ ಕಾವೇರಿ ನೀರು ಬೇಕಾ? ಬೇಡವಾ? ಕಾವೇರಿ ನೀರು ಬೇಡ ಅನ್ನುವವರು ಸರ್ಕಾರಕ್ಕೆ ಪ್ರಮಾಣ ಪತ್ರ ಕೊಡಲಿ ಎಂದು ಅವರು ಆಗ್ರಹಿಸಿದ್ದಾರೆ.