►ಕಾನೂನು, ನಿಯಮಗಳು ಮುಸ್ಲಿಮರಿಗೆ ಮಾತ್ರ ಸೀಮಿತವೇ: ಅನ್ವರ್ ಸಾದತ್ ಬಜತ್ತೂರು ಪ್ರಶ್ನೆ
ಮಂಗಳೂರು: ಮಂಗಳಾ ಆಡಿಟೋರಿಯಂನಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ನೀಡಬಾರದೆಂದು ಹಲವಾರು ಪ್ರಗತಿಪರರು , ಸಾರ್ವಜನಿಕರು,ಅಲ್ಲದೆ ಆಡಳಿತ ಪಕ್ಷದ ನಾಯಕರು ಮತ್ತು ಅದರ ವಿದ್ಯಾರ್ಥಿ ಸಂಘಟನೆ ಕೂಡ ಮನವಿ ಸಲ್ಲಿಸಿದ್ದರು,ಪೋಲಿಸ್ ಬಂದೋಬಸ್ತ್ ಇದ್ದರೂ
ಸಂಘಪರಿವಾರ ವತಿಯಿಂದ ಬಲಾತ್ಕಾರವಾಗಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.ಇದು ಕಾಂಗ್ರೆಸ್ ಸರ್ಕಾರದ ಅಸಮರ್ಥತೆ ಮತ್ತು ಸಂಘಪರಿವಾರದ ಮುಂದೆ ಮಂಡಿಯೂರುವ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಎಸ್ಡಿಪಿಐ ಪಕ್ಷ ಗಣೇಶೋತ್ಸವಕ್ಕೆ ವಿರೋಧವಲ್ಲ ಹಾಗೂ ಎಲ್ಲಾ ಧರ್ಮದ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ.ಆದರೆ ದರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುವ ಸಂಘಪರಿವಾರದ ಹಿಡೆನ್ ಅಜೆಂಡಾದ ಭಾಗವಾದ ಇಂತಹ ಕಾನೂನು ವಿರೋಧಿ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಸರಕಾರದ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ನಾವು ಒಪ್ಪಲ್ಲ.ಕಳೆದ ವರ್ಷ ಹಿಜಾಬ್ ವಿವಾದ ಉಂಟಾದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಹಿಜಾಬ್ ಧರಿಸುತ್ತಾ ಬಂದಿದ್ದ ಮುಸ್ಲಿಂ ವಿಧ್ಯಾರ್ಥಿನಿಯರನ್ನು ಹಿಜಾಬ್ ಕಳಚುವಂತೆ ಆದೇಶ ಹೊರಡಿಸುವಾಗ ಕೊಟ್ಟ ನೆಪ “ವಿವಿ ಯಲ್ಲಿ ಯಾವುದೇ ಧರ್ಮದ ಧಾರ್ಮಿಕ ಆಚರಣೆ” ನಡೆಸುವಂತಿಲ್ಲ ಎಂದಾಗಿತ್ತು. ಹಾಗಾದರೆ ಅವರ ಆದೇಶ ಈ ಗಣೇಶೋತ್ಸವದ ವಿಗ್ರಹ ಪ್ರತಿಷ್ಠಾಪನೆಗೆ ಹೇಗೆ ಅನ್ವಯವಾಗುತ್ತದೆ?
ಈ ಬಗ್ಗೆ ಪ್ರಗತಿಪರರು ಮಾತ್ರವಲ್ಲದೆ ಕಾಂಗ್ರೆಸ್ ನ ವಿಧ್ಯಾರ್ಥಿ ಘಟಕ ಎನ್ಎಸ್ಯುಐ ಕೂಡ ಇದಕ್ಕೆ ಆಕ್ಷೇಪಣೆ ಸಲ್ಲಿಸಿ ಮನವಿ ಮಾಡಿದ್ದರು,ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರಿದ್ದರು ಕೂಡ ಸರ್ಕಾರಕ್ಕೆ ಇದರ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡು ಸಮಾನತೆಯನ್ನು ಪಾಲಿಸಲು ಅಸಾಧ್ಯವಾಗಿರುವುದು ನಾಚಿಗೇಡಿನ ಸಂಗತಿ .ಸರಕಾರವು ಒಂದು ಕಡೆಯಲ್ಲಿ ವಿದ್ಯಾ ಸಂಸ್ಥೆಗಳಲ್ಲಿ ವಿಧ್ಯಾರ್ಥಿಗಳಿಗೆ ದಿನನಿತ್ಯ ಸಂವಿಧಾನದ ಪೀಠಿಕೆ ಯನ್ನು ಬೋಧಿಸುವ ಆದೇಶ ಹೊರಡಿಸಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಭಾಂಗಣದಲ್ಲಿ ಮನುವಾದ ಸಿದ್ಧಾಂತದ ವಕ್ತಾರರಿಗೆ ದಾರ್ಮಿಕ ಕಾರ್ಯಕ್ರಮಗಳ ಮೂಲಕ ಕೋಮ ವಿಷವನ್ನು ಬಿತ್ತಲು ಅವಕಾಶ ಮಾಡಿಕೊಡುವ ಕಾಂಗ್ರೆಸ್ ಸರಕಾರದ ದ್ವಂದ್ವ ನಿಲುವು ಸಂಶಯಾಸ್ಪದ ಆಗಿರುತ್ತದೆ, ಇದನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಕಾಂಗ್ರೆಸ್ ಸರಕಾರವು ತನ್ನ ಎಂದಿನಂತೆ ಡಬ್ಬಲ್ ಗೇಮ್ ರಾಜಕೀಯವನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.
ದ.ಕ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ಕಾಂಗ್ರೆಸ್ ಸರ್ಕಾರ ಇದೆ. ಇಲ್ಲಿ ನಡೆಯುವುದೆಲ್ಲವೂ ಸಂಘನಿಕೇತನದ ತೀರ್ಮಾನದಂತಿದೆ.ಕಾಂಗ್ರೆಸ್ ನಾಯಕರು ಬಿಜೆಪಿ ಸಂಘಪರಿವಾರದ ಅನೈತಿಕತೆಯ ಹಾಗೂ ಕಾನೂನು ಉಲ್ಲಂಘನೆಯ ಬಗ್ಗೆ ಉಗ್ರ ಹೇಳಿಕೆ ಕೊಡುವ ಬದಲಿಗೆ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ ಎಂದು ಅನ್ವರ್ ಸಾದತ್ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.