ಹೊಸದಿಲ್ಲಿ: ಚಂದ್ರಯಾನ 3ರ ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್1 ಮೇಲೆ ಎಲ್ಲರ ಭರವಸೆ ನೆಟ್ಟಿದೆ. ಇದೀಗ ಆದಿತ್ಯ ಎಲ್1 ಭೂಮಿಯ ಐದು ಕಕ್ಷೆಗಳ ಬದಲಿಸಿ ಭೂಮಿಯಿಂದ ಹೊರಗೆ ಬಂದಿದೆ, ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಶುರು ಮಾಡಿದೆ.
ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಅಧ್ಯಯನ ಮಾಡಲಿದೆ. ಭೂಮಿಯ ಕಕ್ಷೆಯಿಂದ ಹೊರಬಂದು ಆದಿತ್ಯ L-1 ಅಧ್ಯಯನ ಆರಂಭಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.
ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಗಳನ್ನು ಅಳೆಯಲು ಸಹಾಯ ಮಾಡಲಿದೆ. ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ-ಎಲ್1 ಮಿಷನ್‌ನ ಉದ್ದೇಶವು ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವುದಾಗಿದೆ. ಇಲ್ಲಿಂದ ನೌಕೆಯು 15 ಲಕ್ಷ ಕಿಲೋಮೀಟರ್ ಪ್ರಯಾಣ ಆರಂಭಿಸಲಿದೆ. ಇದು ಜನವರಿ 2024 ರಲ್ಲಿ 110 ದಿನಗಳ ನಂತರ ಲಾಗ್ರಾಂಜಿಯನ್ ಪಾಯಿಂಟ್ 1 ಅನ್ನು ತಲುಪುತ್ತದೆ.
ಲ್ಯಾಗ್ರೇಂಜ್ ಪಾಯಿಂಟ್ ಗೆ ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಹೆಸರಿಡಲಾಗಿದೆ. ಇದನ್ನು ಆಡುಮಾತಿನಲ್ಲಿ L1 ಎಂದು ಕರೆಯಲಾಗುತ್ತದೆ.
ಆದಿತ್ಯ L1 ಅನ್ನು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11.50 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C57 ನ XL ಆವೃತ್ತಿಯ ರಾಕೆಟ್ ಬಳಸಿ ಉಡಾವಣೆ ಮಾಡಲಾಗಿತ್ತು.