ಹಾವೇರಿ: ಮೂಕಾ ಬಸರಿಕಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ದಲಿತ ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೂಕಬಸರಿಕಟ್ಟಿ ಗ್ರಾಮದ ಖಲಂದರ್ಸಾಬ್ ರಾಜೇಸಾಬನವರ, ರಬ್ಬಾನಿ ರಾಜೇಸಾಬನವರ, ಝಹೀರ್ ಅಹ್ಮದ್ ಸವಣೂರ, ಮೋದಿನಸಾಬ ರಾಜೇಸಾಬನವರ, ಆದಮ್ ಸಾಬ್ ರಾಜೇಸಾಬ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಖಲಂದರ್ಸಾಬ್ ರಾಜೇಸಾಬ್ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಖಲಂದರ್ಸಾಬ್ ರಾಜೇಸಾಬ ಗುಣವಾದ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ ತಿಳಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಮಪ್ಪ ಹರಿಜನ ಎಂದು ಗುರುತಿಸಲಾಗಿದೆ.
ಆ ಪ್ರದೇಶದಲ್ಲಿ ಡಿಶ್ ಆಂಟೆನಾದ ಕೇಬಲ್ ವೈರ್ ಕತ್ತರಿಸಲಾಗಿದೆ ಎಂದು ಆರೋಪಿಸಿ ಆರೋಪಿಗಳು ರಾಮಪ್ಪನಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.