ಬೆಂಗಳೂರು: ರಾಜ್ಯದ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಇವತ್ತು ಸಂಜೆಯೊಳಗೆ ಅಧಿಕೃತವಾಗಿ ಬರ ಪೀಡಿತ ತಾಲೂಕುಗಳ ಘೋಷಣೆಗೆ ಸಹಿ ಹಾಕಲಿದ್ದಾರೆ. ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ ಘೋಷಣೆಗೆ ಅಧಿಸೂಚನೆ ಹೊರಡಿಸುತ್ತೇವೆ. ಬಳಿಕ 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
ಮೊದಲ ಬರ ಘೋಷಣೆ ಮಾಡಬೇಕು, ಬಳಿಕ ಪರಿಹಾರ ಘೋಷಣೆ ಮಾಡಲಾಗುವುದು. ಮೊದಲು 113 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆಗೆ ಆದೇಶ ನೀಡಿದ್ದೇವು. 62 ತಾಲೂಕುಗಳಲ್ಲಿ ಬರಕ್ಕೆ ಅರ್ಹ ವಿವರ ಬಂದಿತ್ತು. ಸಚಿವ ಸಂಪುಟದಲ್ಲೂ ವಿಸ್ರೃತ ಚರ್ಚೆಯಾಗಿತ್ತು. ಆಗ 62 ತಾಲೂಕುಗಳು ಮಾತ್ರವಲ್ಲ ಇನ್ನೂ ಹೆಚ್ಚಿನ ತಾಲೂಕುಗಳಲ್ಲಿ ಬರ ಸ್ಥಿತಿ ಇದೆ ಎಂದು ಚರ್ಚೆಯಾಗಿತ್ತು. ಹೀಗಾಗಿ ಉಳಿದ 134 ತಾಲೂಕುಗಳಲ್ಲಿ ಸಮೀಕ್ಷೆ ಮಾಡಲು ಆದೇಶಿಸಿದ್ದೇವು ಎಂದು ತಿಳಿಸಿದರು.