ಅಮರಾವತಿ: ಸ್ಕಿಲ್ ಹಗರಣದ ಎ1 ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರದ ನಂದ್ಯಾಲದಲ್ಲಿ ಇಂದು (ಸೆ.09) ರಂದು ನಸುಕಿನ ಜಾವ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ 371 ಕೋಟಿ ರೂ. ಅಕ್ರಮ ಎಸಗಿದ್ದು, ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಬಂಧಿಸಲಾಗಿದೆ.
ಚಂದ್ರಬಾಬು ನಾಯ್ಡು ಅವರ ವಿರುದ್ಧ 58 ಕೋಟಿ ಯೋಜನೆಯ ವೆಚ್ಚವನ್ನು 371 ಕೋಟಿ ರೂ.ಗೆ ಹೆಚ್ಚಿಸಿದ ಆರೋಪ ಕೇಳಿಬಂದಿತ್ತು. ಈ ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಐಪಿಸಿ ಸೆಕ್ಷನ್ 166, 167, 481, 420, 465, 468, 471, 409, 201, r/w 109, 34 ಮತ್ತು 37ರ ಅಡಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ.
ಇನ್ನು ಸಿಐಡಿ ಅಧಿಕಾರಿಗಳು ಬಂಧಿಸಲು ಆಗಮಿಸಿದ ವೇಳೆ ಚಂದ್ರಬಾಬು ನಾಯ್ಡು ಅವರು, ನನ್ನ ಹಕ್ಕನ್ನು ಕಸಿಯುವ ಕೆಲಸ ಆಗಿದೆ. ಎಫ್ಐಆರ್ ಮಾಡಿಲ್ಲ, ನೋಟಿಸ್ ನೀಡದೆ ಬಂಧಿಸಲಾಗಿದೆ ಎಂದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಸಿಎಂ ಜಗನ್ ಡೌನ್ ಡೌನ್, ಪೊಲೀಸ್ ಡೌನ್ ಡೌನ್ ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ.