►ಮಂಗಳೂರು ತೈಲದ ಮೇಲೆ ತೇಲುತ್ತಿದೆ ಎಂದ ಭರವಸೆಗಳ ಸಮಿತಿ ಮುಖ್ಯಸ್ಥ
ಮಂಗಳೂರು: ಮಂಗಳೂರು ಬಳಿ ಭೂಮಿಯಡಿಯಲ್ಲಿ ನಿರ್ಮಾಣ ಮಾಡಿರುವ ಕಚ್ಛಾ ತೈಲ ಸಂಗ್ರಹಾಗಾರಗಳಿಂದ ಭವಿಷ್ಯದಲ್ಲಿ ನಗರಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳ ಬಗ್ಗೆ ವಿಧಾನ ಪರಿಷತ್ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಿ.ಎಂ ಫಾರೂಕ್ ಕಳವಳ ವ್ಯಕ್ತಡಿಸಿದ್ದಾರೆ.
ಪರಿಸರ, ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಬಾಕಿಯಿರುವ ಭರವಸೆಗಳ ಬಗ್ಗೆ ಜಿಲ್ಲೆಯಲ್ಲಿ ಪ್ರವಾಸ ಮತ್ತು ಅಧ್ಯಯನ ಮಾಡಿದ ಬಳಿಕ ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಕಚ್ಛಾ ತೈಲ ದಾಸ್ತಾನು ಮಾಡುವ ಎರಡು ಭೂಗತ ಸಂಗ್ರಹಾಗಾರಗಳಿವೆ. ಅಲ್ಲದೇ, ಎಚ್ ಪಿಸಿಎಲ್ ನವರು ಕಾಟಿಪಳ್ಳದ ಬಳಿಯ ಬಾಳ ಗ್ರಾಮದಲ್ಲಿ 500 ಅಡಿ ಭೂಮಿಯ ಆಳದಲ್ಲಿ LPG ಸಂಗ್ರಹಾಗಾರ ನಿರ್ಮಾಣ ಮಾಡುತ್ತಿದ್ದು ಅದರ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಮಂಗಳೂರು ತೈಲ ಮೇಲೆ ತೇಲುತ್ತಿದೆ ಎಂದು ಹೇಳಿದ ಅವರು ಇದು ಚಿಂತೆ ಮಾಡುವ ವಿಷಯ ಎಂದು ಹೇಳಿದರು.
ನಿನ್ನೆ ಭರವಸೆಗಳ ಸಮಿತಿ ಭೂಮಿಯಡಿಯಲ್ಲಿರುವ LPG ಸಂಗ್ರಹಾಗಾರಕ್ಕೆ ಭೇಟಿ ನೀಡಿತ್ತು. ಭೂಕಂಪ ಹಾಗೂ ಇನ್ನಿತರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಈ ಸಂಗ್ರಹಾಗಾರಕ್ಕೆ ಅಪಾಯ ಇದೆಯಾ ಎಂದು ನಾವು ಕಂಪೆನಿಯವರ ಬಳಿ ಕೇಳಿದ್ದೇವೆ. ಅದಕ್ಕೆ ಅವರು ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. 850 ಕೋಟಿ ರುಪಾಯಿ ವೆಚ್ಚದ ಈ ಯೋಜನೆಯ ಕಾಮಗಾರಿ ಒಂದು ವರ್ಷದಲ್ಲಿ ಮುಗಿಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ISPRL ಇಂತಹ ಎರಡ್ಮೂರು ಯೋಜನೆಗಳು ಮಂಗಳೂರಿನಲ್ಲಿ ಮಾಡುವ ಯೋಜನೆ ಮಾಡಿರುವುದು ತಿಳಿದುಬಂದಿದೆ ಎಂದು ಬಿ.ಎಂ ಫಾರೂಕ್ ಮಾಹಿತಿ ನೀಡಿದರು.
ಮಂಗಳೂರು ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿರುವುದರಿಂದ ಈ ತೈಲ ಸಂಗ್ರಹಾಗಾರಗಳಿಂದ ಭವಿಷ್ಯದಲ್ಲಿ ಅಪಾಯ ಎದುರಾಗುವ ಸಾಧ್ಯತೆಗಳ ಬಿ.ಎಂ ಫಾರೂಕ್ ಆತಂಕ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ, ಕ್ಷಿಪಣಿ ದಾಳಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.