ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವಿಕಲಚೇತನ

Prasthutha|

ಕಲಬುರಗಿ: ವಿಕಲಚೇತನ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲ ಮೇಲೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

- Advertisement -

ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ವಿಕಲಚೇತನ ಅಣವೀರಪ್ಪ ಗೌಡಗಾಂವ್‌ನನ್ನು ಟಾರ್ಗೆಟ್ ಮಾಡಿಕೊಂಡಿದ್ದ ಒಂದು ಗುಂಪು ವಿನಾಕಾರಣ ಆತನ ವಿರುದ್ಧ ಇಲ್ಲ ಸಲ್ಲದ ದೂರು ದಾಖಲು ಮಾಡಿ ಕೆಲಸದಿಂದ ತೆಗೆಯೋದಕ್ಕೆ ಮುಂದಾಗಿತ್ತು. ಇದರಿಂದ ನೊಂದಿದ್ದ ಆತ ಗುರುವಾರ ಕಲಬುರಗಿ ಜಿಲ್ಲಾಧಿಕಾರಿ ಬಳಿ ತನ್ನ ನೋವನ್ನು ತೋಡಿಕೊಳ್ಳಲು ಬಂದಿದ್ದ. ಆದರೆ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲ ಮೇಲೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನಿವಾಸಿಯಾಗಿರುವ ಅಣವೀರಪ್ಪ ಉಡಚಣ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಆದರೆ ಅಫಜಲಪುರ ತಾಲೂಕಿನ ಬಸವರಾಜ್ ಹಡಪದ ಹಾಗೂ ಟೀಮ್ ಈತನನ್ನು ಮತ್ತು ಈತನ ಜೊತೆಗಿದ್ದವರನ್ನು ಕೆಲಸದಿಂದ ತೆಗೆದು ಹಾಕಿಸಲು ಪ್ಲ್ಯಾನ್ ಮಾಡಿ ಇವರ ವಿರುದ್ಧ ಮೇಲಾಧಿಕಾರಿಗಳಿಗೆ ಸುಳ್ಳು ದೂರು ದಾಖಲು ಮಾಡುವುದಕ್ಕೆ ಮುಂದಾಗಿದ್ದರು. ಇದರಿಂದ ಮನನೊಂದು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಬಂದಿದ್ದ ಅಣವೀರಪ್ಪ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಿದ್ದಾರೆ.

- Advertisement -

ವಿಷ ಸೇವಿಸಿ ಅಸ್ವಸ್ಥಗೊಂಡ ಅಣವೀರಪ್ಪ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಸವರಾಜ್ ಹಡಪದ ಕೂಡ ಆರಂಭದಲ್ಲಿ ಅಫಜಲಪುರ ತಾಲೂಕಿನಲ್ಲಿ ತಾಲೂಕು ವಿವಿಧ ಪುರ್ನವಸತಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವಾಗ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡೋದಕ್ಕೆ ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಬಸವರಾಜ್ ಹಡಪದ ತನ್ನ ಕೆಲಸ ಕಳೆದುಕೊಳ್ಳಲು ಅಣವೀರಪ್ಪ ಮತ್ತು ಆತನ ಜೊತೆಗಿದ್ದವರೇ ಕಾರಣ ಎಂದುಕೊಂಡು ಅವರಿಗೆ ಟಾರ್ಚರ್ ಕೊಡುತ್ತಿದ್ದ. ಈತನ ಟಾರ್ಚರ್‌ಗೆ ನೊಂದು ಅಣವೀರಪ್ಪ ಪೊಲೀಸ್ ಠಾಣೆಯಲ್ಲಿ ಅಂಗವಿಕಲ ಜಿಲ್ಲಾ ಕಲ್ಯಾಣಾಧಿಕಾರಿ ಸೇರಿ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದ. ಆದರೆ ಯಾವುದೇ ಪ್ರಯೋಜನ ಆಗಿರದಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಆತ್ಮಹತ್ಯೆ ಯತ್ನದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಈ ರೀತಿಯ ಘಟನೆ ಆಗಬಾರದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅಣವೀರಪ್ಪ ಸೇರಿ ನಮ್ಮ ಇಲಾಖೆಯ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಭರವಸೆ ನೀಡಿದ್ದಾರೆ.



Join Whatsapp