ಚಾಮರಾಜನಗರ: ಪ್ರಧಾನಿ ಮೋದಿ ಬಂಡೀಪುರಕ್ಕೆ ಆಗಮಿಸಿ ಸಫಾರಿ ನಡೆಸಿದ್ದರು. ಪ್ರಧಾನಿ ಮೋದಿಯ ಚಾಪರ್ ಲ್ಯಾಂಡಿಂಗ್ ಗಾಗಿ ಮಾಡಿದ್ದ ಹೆಲಿಪ್ಯಾಡ್ ಈಗ ವಿವಾದಕ್ಕೆ ಒಳಗಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ಮೋದಿ ಚಾಪರ್ ಲ್ಯಾಂಡಿಂಗ್ ಗಾಗಿ ಅವಕಾಶ ಮಾಡಿ ಕೊಟ್ಟ ರೈತ ಇದೀಗ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮೋದಿಗೆ ಪತ್ರ ಬರೆಯುವ ನಿರ್ಧಾರ ಕೂಡ ಮಾಡಿದ್ದಾರೆ.
ಕಳೆದ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡಿಪುರಕ್ಕೆ ಆಗಮಿಸಿ ಸಫಾರಿ ಮಾಡಿದ್ದರು. ಮೋದಿ ಆಗಮನ ಹಿನ್ನೆಲೆ ಶಿವಣ್ಣ ಎಂಬವರ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಪ್ರಧಾನಿ ಚಾಪರ್ ಲ್ಯಾಂಡಿಂಗ್ ಹಾಗೂ ಎಸ್.ಪಿ.ಜಿ ಭದ್ರತಾ ಪಡೆಗೆ ಎರಡು ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದ ಜಿಲ್ಲಾಡಳಿತ ಬಳಿಕ ಜಮೀನನ್ನು ಮತ್ತೆ ಸರಿ ಪಡಿಸಿ ಕೊಡದೇ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಜಮೀನಿನಲ್ಲಿ ಏನನ್ನೂ ಬೆಳೆಯಲಾಗದೆ ರೈತ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಮೋದಿ ಲ್ಯಾಂಡ್ ಆದ ಸ್ಥಳವೆಂದು ನೋಡಲು ಬರುವ ಕೆಲ ಯುವಕರು ಮದ್ಯ ಸೇವಿಸಿ ಬಾಟ್ಲಿಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ ಎಂದು ರೈತ ದೂರಿದ್ದಾರೆ.