ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಮಂಡ್ಯದ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಬುಧವಾರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು.
ಬೆಂಗಳೂರಿನ ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಉಭಯ ನಾಯಕರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ‘ಆಪರೇಷನ್ ಹಸ್ತ’ ದ ವದಂತಿ ಹೆಚ್ಚುತ್ತಿರುವ ಸಂದರ್ಭದಲ್ಲೇ ಉಭಯ ನಾಯಕರು ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಮೇಗೌಡ, ‘ನಾನು ಹಾಗೂ ಡಿಕೆ ಶಿವಕುಮಾರ್ ಸಂಬಂಧಿಕರು. ಕಷ್ಟ ಸುಖ ಮಾತನಾಡಲು ಬಂದಿದ್ದೆ. ರಾಜಕೀಯ ವಿಚಾರ ಚರ್ಚಿಸಿಲ್ಲ. ಸಂಬಂಧಿಕನಾಗಿ ಕೆಲ ವಿಚಾರಗಳನ್ನು ಮಾತನಾಡಲು ಬಂದಿದ್ದೆ. ಹೀಗೆ ಆಗಾಗ ಬರುತ್ತಿರುತ್ತೇನೆ’ಎಂದು ಹೇಳಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಗ್ಗೆ ಶಿವರಾಮ್ ಹೆಬ್ಬಾರ್ ಏನೂ ಪ್ರತಿಕ್ರಿಯೆ ನೀಡಿಲ್ಲ. ಹೆಬ್ಬಾರ್, ಎಸ್ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಹಿಂದೆಯೂ ಕೆಲವು ಬಾರಿ ಭೇಟಿಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಮಧ್ಯೆ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು ಕೂಡ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಡಿಕೆ ಶಿವಕುಮಾರ್, ಅವರ ತಂದೆ ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ನಮ್ಮ ನಾಯಕರಾಗಿದ್ದರು. ನಾನು ಅವರೊಂದಿಗೆ ರಾಜಕೀಯದ ಬಗ್ಗೆ ಚರ್ಚಿಸಿಲ್ಲ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ನಿವಾಸಕ್ಕೆ ಆಹ್ವಾನಿಸಿದ್ದರು. ಹೀಗಾಗಿ ತೆರಳಿದ್ದೆ ಅಷ್ಟೆ ಎಂದು ಹೇಳಿದ್ದರು.
ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಕೂಡ ಇತ್ತೀಚೆಗೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಇದೂ ಸಹ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸ್ಪಷ್ಟನೆ ನೀಡಿದ್ದ ಡಿಕೆ ಶಿವಕುಮಾರ್, ಅನಂತ್ ಕುಮಾರ್ ಅವರ ಸ್ಮರಣಾರ್ಥದ ಕಾರ್ಯಕ್ರಮದ ಕುರಿತು ಚರ್ಚಿಸಲು ತೇಜಸ್ವಿನಿ ಅನಂತ್ ಕುಮಾರ್ ತಮ್ಮನ್ನು ಭೇಟಿಯಾಗಿದ್ದರು. ರಾಜಕೀಯ ಚರ್ಚಿಸಿಲ್ಲ ಎಂದು ಹೇಳಿದ್ದರು.