ಮಂಡ್ಯ: ತಮಿಳುನಾಡಿಗೆ ನೀರು ನಿಲ್ಲಿಸುವಂತೆ ಆಗ್ರಹಿಸಿ ಕಳೆದ 8 ದಿನಗಳಿಂದ ಕೆಆರ್ಎಸ್ ಡ್ಯಾಂ ಬಳಿ ನಡೆಯುತ್ತಿದ್ದ ಹೋರಾಟವನ್ನು ಇದೀಗ ರೈತ ಸಂಘಟನೆಗಳ ಪ್ರಮುಖ ಮುಖಂಡರ ಸಭೆ ಬಳಿಕ ತಾತ್ಕಾಲಿಕ ವಾಪಸ್ ಪಡೆದಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಇದಾಗಿದ್ದು, ನಾಳೆ (ಸೆ.06) ಸಿಎಂ ಸಿದ್ದರಾಮಯ್ಯ ಅವರನ್ನು ದರ್ಶನ್ ಪುಟ್ಟಣ್ಣಯ್ಯ ಸೇರಿ ಹಲವು ಪ್ರಮುಖ ಮುಖಂಡರು ಭೇಟಿ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ಈ ವೇಳೆ ವಾಸ್ತವ ಪರಿಸ್ಥಿತಿಯನ್ನು ಸಿಎಂಗೆ ಮನವರಿಕೆ ಮಾಡಿಕೊಡಲು ನಿರ್ಧಾರ ಮಾಡಿಕೊಳ್ಳಲಾಗಿದೆ.
ಸೆ.11ರಂದು ಬೆಂಗಳೂರು-ಮೈಸೂರು ಹೈವೇ ಬಂದ್ಗೆ ತೀರ್ಮಾನ
ಇನ್ನು ಈಗಾಗಲೇ ತಾತ್ಕಾಲಿಕ ಧರಣಿಯನ್ನು ವಾಪಾಸ್ ಪಡೆದಿರುವ ರೈತ ಮುಖಂಡರು, ಮುಂದೆ ಕೆಆರ್ಎಸ್ ಬದಲು ಶ್ರೀರಂಗಪಟ್ಟಣದಲ್ಲಿ ಧರಣಿ ನಡೆಸಲು ನಿರ್ಧಾರ ಮಾಡಿಕೊಂಡಿದ್ದಾರೆ. ಇದರ ಜೊತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸೆ.11ರಂದು ಬೆಂಗಳೂರು-ಮೈಸೂರು ಹೈವೇ ಬಂದ್ಗೆ ತೀರ್ಮಾನ ಮಾಡಿದ್ದಾರೆ. ಇನ್ನು ಸೆ.04ರಂದು ಪ್ರತಿಭಟನೆ ವೇಳೆ ಮಾತನಾಡಿದ್ದ ಕರ್ನಾಟಕ ಸರ್ವೋದಯ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ‘ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಅಹೋರಾತ್ರಿ ಚಳುವಳಿ ಮಾಡುತ್ತಿದ್ದು, ಇದೀಗ ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ’ ಎಂದಿದ್ದರು.
‘ಸರ್ಕಾರದಿಂದ ಯಾವ ರೀತಿ ಕೇಸ್ ಫೈಲ್ ಮಾಡಿದ್ದಾರೆ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಅದರ ಮೇಲೆ ನಾವು ಸಹ ಪೆಟಿಶನ್ ಹಾಕುತ್ತೇವೆ. ಬುಧವಾರದ ಒಳಗೆ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದ ಅವರು ‘ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮರನ್ನ ಭೇಟಿ ಮಾಡುತ್ತೇವೆ. ಸರ್ಕಾರ ಯಾವ ರೀತಿ ಅರ್ಜಿ ಹಾಕಿದೇ ಎನ್ನುವುದರ ಮೇಲೆ ನಾವು ರಿಟ್ ಅರ್ಜಿ ಸಲ್ಲಿಸುತ್ತೇವೆ. ಮೊದಲು ಸರ್ಕಾರದಿಂದ ಮಾಹಿತಿ ಪಡೆಯುತ್ತೇವೆ. ಬಳಿಕ ಸರ್ಕಾರದ ಅರ್ಜಿ ಒಳಗೆ ಸೇರಿಸಲು ಸಾಧ್ಯವಾ ಎನ್ನುವುದನ್ನು ಚರ್ಚಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.