ಕುಂದಾಪುರ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರೈತ ಮೃತ್ಯು

Prasthutha|

►ಕೃಷಿ ಇಲಾಖೆಯಿಂದ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿ, ಉತ್ತಮ ಇಳುವರಿ ಪ್ರಶಸ್ತಿಗೆ ಪಾತ್ರರಾಗಿದ್ದ ಭುಜಂಗ ಶೆಟ್ಟಿ

- Advertisement -

ಕುಂದಾಪುರ: ಕೋಟ ಎಂಬಲ್ಲಿನ ಯಡ್ತಾಡಿ ಗೋಳಿಮರ ಸಮೀಪ ಸೆ. 3ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾವಡಿ ಹವರಾಲು ನಿವಾಸಿ ಭುಜಂಗ ಶೆಟ್ಟಿ (83) ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

ಅವರು ಡೇರಿಗೆ ಹಾಲು ನೀಡಲು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಇನ್ನೊಂದು ಸ್ಕೂಟಿ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಭುಜಂಗ ಶೆಟ್ಟಿಯವರು ಗಂಭೀರವಾಗಿ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ. ಅವರು 36 ವರ್ಷಗಳ ಕಾಲ ಕೆ.ಎಸ್‌.ಆರ್‌.ಟಿ.ಸಿ. ಕಂಡಕ್ಟರ್‌ ಆಗಿ ಸೇವೆ ಸಲ್ಲಿಸಿದ್ದು, ಟ್ರಾಫಿಕ್‌ ಕಂಟ್ರೋಲರ್‌ ಆಗಿ ನಿವೃತ್ತಿ ಹೊಂದಿದ್ದರು ಹಾಗೂ 83ರ ವಯಸ್ಸಿನಲ್ಲೂ ಕೃಷಿ, ಹೈನುಗಾರಿಕೆ ಕೆಲಸದಲ್ಲಿ ತೊಡಗಿಕೊಂಡು ಕೃಷಿ ಕ್ಷೇತ್ರದಲ್ಲಿ ಆಳವಾದ ಮಾಹಿತಿ ಹೊಂದಿದ್ದರು.

ರೈತ ಶಕ್ತಿ ಸಂಘಟನೆ ಎಂಬ ಸಂಘವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸ್ಥಳೀಯ ಕೃಷಿಕರಿಗೆ ಬೇಸಾಯದ ಕುರಿತು ಮಾಹಿತಿ, ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿದ್ದರು. ಕೃಷಿ ಇಲಾಖೆಯಿಂದ ತಾಲೂಕು ಉತ್ತಮ ಕೃಷಿಕ ಪ್ರಶಸ್ತಿ, ಉತ್ತಮ ಇಳುವರಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಭಜನ ಕ್ಷೇತ್ರದಲ್ಲಿ ಸುಮಾರು ಎಳು ದಶಕಗಳ ಕಾಲ ಸೇವೆ ಸಲ್ಲಿಸಿ ಸಂಘ-ಸಂಸ್ಥೆಗಳಿಂದ ಸಮ್ಮಾನಕ್ಕೆ ಪಾತ್ರರಾಗಿದ್ದರು.



Join Whatsapp