ತಮಿಳುನಾಡಿಗೆ ಕಾವೇರಿ ನೀರು; ಇಂದು ಕೆಆರ್‌ಎಸ್ ಡ್ಯಾಂ ಮುತ್ತಿಗೆಗೆ ರೈತರ ಕರೆ

Prasthutha|

ಮಂಡ್ಯ: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯ ಕಾವೇರಿ ಚಳುಚಳಿಯ ಕಾವು ದಿನೇ ದಿನೇ ಹೆಚ್ಚಾಗುತ್ತಾ ಇದೆ. ಇಂದು (ಸೋಮವಾರ) ಕೆಆರ್‌ಎಸ್ ಡ್ಯಾಂ ಮುತ್ತಿಗೆಗೆ ರೈತರು ಕರೆ ನೀಡಿದ್ದಾರೆ.

- Advertisement -

ದಿನೇ ದಿನೇ ಸಹನೆ ಕಳೆದುಕೊಳ್ಳುತ್ತಿರುವ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಡಬ್ಲೂಎಂಎ ಆದೇಶದಂತೆ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಸಂಕಷ್ಟದ ಮಧ್ಯೆಯೂ ನೀರು ಬಿಡುತ್ತಿರುವುದಕ್ಕೆ ಮಂಡ್ಯದಲ್ಲಿ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ‘ಕಾವೇರಮ್ಮ ನಮ್ಮನ್ನು ಬಿಟ್ಟೋಗಬೇಡಾ’ ಎಂದು ಕಾವೇರಿ ತಾಯಿಯ ಪ್ರತಿಮೆ ತಬ್ಬಿ ಚಳುವಳಿ ನಡೆಸಿದ್ದಾರೆ.

ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಕಳೆದ ಐದು ದಿನಗಳಿಂದ 25 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದ ಐದು ದಿನಗಳಲ್ಲೇ 2 ಟಿಎಂಸಿ ನೀರು ಖಾಲಿಯಾಗಿದೆ. ಕಾವೇರಿ ಪ್ರಾಧಿಕಾರ ಹೇಳಿದಂತೆ ಉಳಿದ 10 ದಿನಗಳ ಕಾಲ ನೀರು ಹರಿಸಿದರೆ, 5 ಟಿಎಂಸಿಗೂ ಅಧಿಕ ನೀರು ತಮಿಳುನಾಡು ಪಾಲಾಗಲಿದೆ. ಸದ್ಯ ಕೆಆರ್‌ಎಸ್ ನೀರಿನ ಮಟ್ಟ 22 ಟಿಎಂಸಿ ಮುಟ್ಟಿದ್ದು, ಇದೇ ರೀತಿ ನೀರು ಬಿಟ್ಟರೆ ಕೆಆರ್‌ಎಸ್ ಡ್ಯಾಂನಲ್ಲಿ 17 ಟಿಎಂಸಿ ನೀರು ಮಾತ್ರ ಉಳಿಯಲಿದೆ. ಈ ಪೈಕಿ 6 ಟಿಎಂಸಿ ಡೆಡ್ ಸ್ಟೋರೇಜ್ ತೆಗೆದರೆ ಉಪಯೋಗಕ್ಕೆ ಬರುವುದು ಕೇವಲ 11 ಟಿಎಂಸಿ ನೀರು ಮಾತ್ರ. ಇದು ವ್ಯವಸಾಯಕ್ಕಿರಲಿ ಕುಡಿಯೋದಕ್ಕೂ ಸಹ ಸಾಲಲ್ಲ.

- Advertisement -

ರಾಜ್ಯ ಸರ್ಕಾರ ವಾಸ್ತವ ಸ್ಥಿತಿಯನ್ನು ಕಾವೇರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ವಿಫಲಾಗಿದೆ ಎಂದು ಕಳೆದ 5 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಆರ್‌ಎಸ್ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸುತ್ತಿವೆ. ಇನ್ನೂ ಭೂಮಿ ತಾಯಿ ಹೋರಾಟ ಸಮಿತಿ ಶ್ರೀರಂಗಪಟ್ಟಣದಲ್ಲಿ ಪ್ರತಿ ದಿನ ವಿನೂತನ ಪ್ರತಿಭಟನೆ ಮಾಡುತ್ತಿದೆ. ಅತ್ತ ಮಂಡ್ಯದಲ್ಲಿ ರೈತ ಹಿತರಕ್ಷಣ ಸಮಿತಿ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿತು. ರಾಜ್ಯ ಗಡಿಭಾಗ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸೂರ್ಯನಗರದಿಂದ ಚಂದಾಪುರ ವೃತ್ತದವರೆಗೆ ಪಂಜಿನ ಮೆರವಣಿಗೆ ಸಾಗಿತು.

ಇಂದು ಕೂಡ ಮಂಡ್ಯ ಜಿಲ್ಲೆಯಾದ್ಯಂತ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ರಾಜ್ಯ ರೈತ ಸಂಘದ ರೈತ ಬಣದ ಪದಾಧಿಕಾರಿಗಳು ಇಂದು ಕೆಆರ್‌ಎಸ್ ಡ್ಯಾಂ ಮುತ್ತಿಗೆಗೆ ಕರೆ ನೀಡಿದ್ದಾರೆ. ತಮಿಳುನಾಡಿಗೆ ನಿರಂತರ ನೀರು ಬಿಡುಗಡೆ ಖಂಡಿಸಿ ರೈತರ ಚಳುವಳಿಗಳು ತೀವ್ರಗೊಳ್ಳುತ್ತಿವೆ.



Join Whatsapp