ರಾಮನಗರ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರವಾಗಿ ಸೆ.8 ರಂದು ರಾಮನಗರ ಬಂದ್‍ಗೆ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಕರೆ ನೀಡಿದೆ. ಬಂದ್‍ಗೆ ಸಾರ್ವಜನಿಕರು ಸಹಕಾರ ನೀಡುವಂತೆ ಅಂಗಡಿ ಮುಂಗ್ಗಟ್ಟು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ತವರು ಜಿಲ್ಲೆಯಲ್ಲೇ ಈ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಬಾರದು. ಸರ್ಕಾರ ನಿಮ್ಮದೇ ಇದೆ. ನಿಮಗೆ ಅಧಿಕಾರ ಇದೆ. ಕನಕಪುರಕ್ಕೆ ಬೇಕಿದ್ದರೆ ಮತ್ತೊಂದು ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಕೊಳ್ಳಿ. ಆದರೆ ರಾಮನಗರಕ್ಕೆ ಮಂಜೂರಾಗಿರುವ ಕಾಲೇಜನ್ನು ಯಾವುದೇ ಕಾರಣಕ್ಕೂ ಜಿಲ್ಲಾ ಕೇಂದ್ರದಿಂದ ಸ್ಥಳಾಂತರ ಮಾಡಬಾರದು ಎಂಬುದು ಹೋರಾಟಗಾರರ ಒತ್ತಾಯವಾಗಿದೆ.
ಈ ಹಿನ್ನೆಲೆಯಲ್ಲಿ ಇದೇ ಸೆ.8ರಂದು ರಾಮನಗರ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಇದಕ್ಕೂ ಸರ್ಕಾರ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಜನಜಾಗೃತಿಗಾಗಿ ಇಂದಿನಿಂದ ಪೋಸ್ಟರ್ ಚಳವಳಿ ಆರಂಭಿಸಲಾಗಿದೆ. ಬಂದ್‍ಗೆ ಎಲ್ಲಾ ಕನ್ನಡಪರ ಸಂಘಟನೆಗಳು, ಕಾರ್ಮಿಕ, ದಲಿತ ಮತ್ತು ಜವಳಿ ಸಂಘಟನೆಗಳು ಬೆಂಬಲ ಘೋಷಿಸಿವೆ.
ಇದರ ನಡುವೆಯೇ ಡಿಕೆ ಬ್ರದರ್ಸ್ ನಡೆ ವಿರುದ್ಧ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಕಿಡಿಕಾರಿದ್ದಾರೆ. ನಿಮ್ಮ ವರ್ತನೆ ಬದಲಿಸಿಕೊಳ್ಳಬೇಕು. ನೀವು ಕನಕಪುರಕ್ಕೆ ಮಾತ್ರ ಡಿಸಿಎಂ ಅಲ್ಲ, ಇಡೀ ರಾಜ್ಯಕ್ಕೆ ಡಿಸಿಎಂ ಎಂಬುದನ್ನು ಮರೆಯಬಾರದು. ಇಲ್ಲಿ ಧಮ್ಕಿ ನಡವಳಿಕೆಗೆ ಬಗ್ಗುವುದಿಲ್ಲ ಎಂದು ಗುಡುಗಿದ್ದಾರೆ.