ಹೊಸದಿಲ್ಲಿ: ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಗೆ (FTII) ಅಧ್ಯಕ್ಷರನ್ನಾಗಿ ತಮಿಳು ನಟ, ನಿರ್ದೇಶಕ ಆರ್ ಮಾಧವನ್ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಎಕ್ಸ್ (ಟ್ವಿಟ್ಟರ್) ಮೂಲಕ ಈ ವಿಷಯವನ್ನು ಘೋಷಿಸಿದ್ದಾರೆ. ಆರ್.ಮಾಧವನ್ ನಟಿಸಿ, ನಿರ್ದೇಶನ ಮಾಡಿರುವ ‘ರಾಕೆಟ್ರಿ; ದಿ ನಂಬಿ ಎಫೆಕ್ಟ್’ ಸಿನಿಮಾಕ್ಕೆ ಕೆಲವು ದಿನಗಳ ಹಿಂದಷ್ಟೆ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿತ್ತು. ಇದೀಗ ಮತ್ತೊಂದು ಸಿಹಿ ಸುದ್ದಿ ನಟನ ಅರಸಿ ಬಂದಿದೆ.
ಭಾರತೀಯ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿರುವ ಆರ್ ಮಾಧವನ್ಗೆ ಅಭಿನಂದನೆಗಳು. ನಿಮ್ಮ ಅಪಾರ ಅನುಭವ ಹಾಗೂ ಬಲವಾದ ನೈತಿಕತೆಯಿಂದ ಈ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತೀರೆಂಬ ವಿಶ್ವಾಸವಿದೆ. ಧನಾತ್ಮಕ ಬದಲಾವಣೆಗಳನ್ನು ಸಂಸ್ಥೆಯಲ್ಲಿ ತನ್ನಿ ಸಂಸ್ಥೆಯನ್ನು ಪ್ರಗತಿಯತ್ತ ಕೊಂಡೊಯ್ಯಿರಿ. ನಿಮಗೆ ನನ್ನ ಅಭಿನಂದನೆಗಳು” ಎಂದು ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.
ಅನುರಾಗ್ ಠಾಕೂರ್ ಅವರ ಟ್ವಿಟ್ಗೆ ಪ್ರತಿಕ್ರಿಯೆ ನೀಡಿರುವ ಆರ್ ಮಾಧವನ್, ”ಈ ಗೌರವ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಎಲ್ಲರ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಶಕ್ತಿ ಮೀರಿ ಯತ್ನಿಸುತ್ತೇನೆ” ಎಂದಿದ್ದಾರೆ.
ಆರ್ ಮಾಧವನ್ ಗೂ ಮುನ್ನ, ಶೇಖರ್ ಕಪೂರ್ ಅವರು ಎಫ್ಟಿಐಐ ಅಧ್ಯಕ್ಷರಾಗಿದ್ದರು. ಇದೀಗ ಮಾಧವನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಪ್ರಾತಿನಿಧ್ಯ ನೀಡಿದಂತಾಗಿದೆ. ಪುಣೆಯಲ್ಲಿರುವ ಎಟಿಐಐ ಭಾರತದ ಅಗ್ರಗಣ್ಯ ಸಿನಿಮಾ ಹಾಗೂ ದೂರದರ್ಶನ ಸಂಸ್ಥೆಯಾಗಿದೆ. 1961 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ 63 ವರ್ಷದ ಇತಿಹಾಸವಿದೆ. ದಕ್ಷಿಣ ಭಾರತ ಚಿತ್ರರಂಗದವರು ಈ ಸಂಸ್ಥೆಯ ಅಧ್ಯಕ್ಷರಾಗಿರುವುದು ಬಹಳ ಕಡಿಮೆ. ಮಲಯಾಳಂ ಸಿನಿಮಾ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಕನ್ನಡದ ಗಿರೀಶ್ ಕಾರ್ನಾಡ್, ಯುಆರ್ ಅನಂತಮೂರ್ತಿ ಅವರುಗಳು ಈ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆರ್.ಕೆ.ಲಕ್ಷ್ಮಣ್, ಶ್ಯಾಮ್ ಬೆನಗಲ್, ಮೃಣಾಲ್ ಸೇನ್, ಇತ್ತೀಚೆಗೆ ಅನುಪಮ್ ಖೇರ್, ಶೇಕರ್ ಕಪೂರ್ ಅವರುಗಳು ಸಹ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.