ಚಿಕ್ಕಬಳ್ಳಾಪುರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲು ನಿಲ್ದಾಣದಲ್ಲಿ ಇಳಿಯುತ್ತಿದಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವಂತಹ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕಲ್ಬುರ್ಗಿ ಜಿಲ್ಲೆಯ ಚಂದ್ರಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದವರು. ಇವರು 8 ತಿಂಗಳ ಗರ್ಭಿಣಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಚಿತ್ತಾಪುರ ಗ್ರಾಮದ ಸಂಬಂಧಿಕರ ಮನೆಗೆ ಸಹೋದರ ಹಾಗೂ ಸಂಬಂಧಿಕರೊಂದಿಗೆ ಉದ್ಯಾನ್ ಎಕ್ಸ್ಪ್ರೆಸ್ ಮೂಲಕ ಕಲಬುರಗಿಗೆ ಪ್ರಯಾಣಿಸುತ್ತಿದ್ದರು.
ರೈಲು ಬೆಂಗಳೂರಿನಿಂದ ಯಲಹಂಕ ತಲಪುವಷ್ಟರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿ, ಸಹಾಯಕ್ಕೆ ಮನವಿ ಮಾಡಿದ್ದರು. ಅದರಂತೆ, ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಇಳಿದು ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ ಮಾಡಲಾಗಿತ್ತು.
ಆದರೆ, ಚಂದ್ರಮ್ಮಗೆ ಗೌರಿಬಿದನೂರು ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಹೆರಿಗೆ ನೋವು ಮತ್ತಷ್ಟು ಹೆಚ್ಚಾಗಿ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲೇ ಅವರಿಗೆ ಹೆರಿಗೆಯಾಗಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ. ಹೆರಿಗೆಯ ನಂತರ ಇಬ್ಬರನ್ನ ಗೌರಿಬಿದನೂರು ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರು ತಾಯಿ ಮಕ್ಕಳಿಗೆ ಹಾರೈಕೆ ಮಾಡುತ್ತಿದ್ದಾರೆ.