ಆನೇಕಲ್: ಶ್ರೀಗಂಧದ ಮರ ಕದಿಯಲು ಬಂದಿದ್ದ ಕಳ್ಳನ ಮೇಲೆ ಬೀಟ್ ಫಾರೆಸ್ಟ್ಗಾರ್ಡ್ ಫೈರಿಂಗ್ ಮಾಡಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆ ಬಳಿ ನಡೆದಿದೆ.
ಹಲವು ದಿನಗಳಿಂದ ಅರಣ್ಯದಲ್ಲಿ ಶ್ರೀಗಂಧದ ಮರಗಳು ಕಳುವಾಗಿದ್ದವು. ಹೀಗಾಗಿ ಅರಣ್ಯದಲ್ಲಿ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಗಂಧದ ಮರ ಕಳ್ಳತನ ಮಾಡಲು ಇಬ್ಬರು ಬಂದಿದ್ದರು.
ಇದೇ ವೇಳೆ ರೌಂಡ್ಸ್ನಲ್ಲಿದ್ದ ಫಾರೆಸ್ಟ್ ಗಾರ್ಡ್ಗಳಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಆಗ ಫಾರೆಸ್ಟ್ ಗಾರ್ಡ್ಗಳು ಶರಣಾಗುವಂತೆ ವಾರ್ನಿಂಗ್ ಮಾಡಿದ್ದಾರೆ. ಶರಣಾಗದೆ ಪರಾರಿಯಾಗಲು ಯತ್ನಿಸಿದಾಗ ಫಾರೆಸ್ಟ್ಗಾರ್ಡ್ ವಿನಯ್ ಫೈರಿಂಗ್ ಮಾಡಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊರ್ವ ಪರಾರಿಯಾಗಿದ್ದಾನೆ. ಮೃತನು ಮಾಲೂರು ಮೂಲದವನೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಮತ್ತು ಎಫ್ಎಸ್ಎಲ್ ಟೀಮ್ ಭೇಟಿ ನೀಡಿದೆ.
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಫಾರೆಸ್ಟ್ಗಾರ್ಡ್ ಹಾಗೂ ಇಬ್ಬರು ವಾಚರ್ಸ್ ರೌಂಡ್ಸ್ನಲ್ಲಿದ್ದರು. ಈ ಜಾಗದಲ್ಲಿ ವನ್ಯ ಜೀವಿಗಳು ಹಾಗೂ ಶ್ರೀಗಂಧ ಮರಗಳು ಇರುವುದರಿಂದ ಕಳ್ಳರ ಹಾವಳಿ ಇದೆ. ಹೀಗಾಗಿ ಫಾರೆಸ್ಟ್ ವಾಚರ್ ಹಾಗೂ ಗಾರ್ಡ್ ನೈಟ್ ಪೆಟ್ರೋಲಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡುತ್ತಿದ್ದಂತೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಕಳ್ಳ ಮುಂದಾಗಿದ್ದಾನೆ. ಶರಣಾಗುವಂತೆ ವಾರ್ನ್ ಮಾಡಿದರೂ, ಕೇಳದೆ ಇದ್ದಾಗ ಫೈರಿಂಗ್ ಮಾಡಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.
ಈ ವೇಳೆ ಮತ್ತೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ಮುಖ್ಯ ರಸ್ತೆಗೆ ಸಮೀಪದಲ್ಲಿಯೇ ಇರುವುದರಿಂದ ಕಾಂಪೌಂಡ್ ಜಿಗಿದು ಬಂದಿರುವ ಶಂಕೆ ಇದೆ. ಸ್ಥಳದಲ್ಲಿ ಗರಗಸ, ಮಚ್ಚುಗಳು ಸಿಕ್ಕಿವೆ. ಪ್ರಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್, ಎಫ್ಎಸ್ಎಲ್ ತಂಡದವರು ಸಹ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.