ದಾವಣಗೆರೆ: ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿ ಭಾರತಕ್ಕೆ ಮೃತದೇಹ ತರಬೇಕು ಎಂದು ಕುಟುಂಬಸ್ಥರು ಸರ್ಕಾರದ ಮೊರೆ ಹೋಗಿದ್ದರು. ಆದರೆ ದೇಹ ಕೊಳೆತ ಹಿನ್ನೆಲೆ ಹಾಗೂ ತನಿಖೆ ವಿಚಾರವಾಗಿ ಅಮೆರಿಕದ ಕ್ಯಾಟೊನ್ಸ್ವಿಲ್ಲೆನಲ್ಲಿ ಮೂವರ ಅಂತ್ಯಸಂಸ್ಕಾರ ನೆರವೇರಿದೆ. ಭಾರತೀಯ ಕಾಲಮಾನ ನಿನ್ನೆ ರಾತ್ರಿ 11.30ಕ್ಕೆ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.
ಅಂತ್ಯಕ್ರಿಯೆ ವೇಳೆ ಯೋಗೇಶ್ & ಪ್ರತಿಭಾ ಕುಟುಂಬಸ್ಥರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಪತ್ನಿ, ಮಗನನ್ನು ಶೂಟ್ ಮಾಡಿ ಬಳಿಕ ಗಂಡ ಕೂಡ ಗುಂಡು ಹಾರಿಸಿಕೊಂಡಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಮಾಹಿತಿ ಇದೆ. ಸದ್ಯ ಕ್ಯಾಟೊನ್ಸ್ವಿಲ್ಲೆನಲ್ಲಿ ಯೋಗೇಶ್, ಪ್ರತಿಭಾ & ಯಶ್ ಅಂತ್ಯಕ್ರಿಯೆ ನೆರವೇರಿದೆ. ಪ್ರಕರಣ ಸಂಬಂಧ ಬಾಲ್ಟಿಮೋರ್ ಪೊಲೀಸರಿಂದ ತನಿಖೆ ಮುಂದುವರಿದಿದೆ. ಅಮೆರಿಕಾದಲ್ಲಿ ದಾವಣಗೆರೆ ಮೂಲದ ಮೂವರು ಸಾವನ್ನಪ್ಪಿ ಹನ್ನೊಂದು ದಿನಗಳಾಗಿವೆ.
ನಿನ್ನೆ (ಆ.26) ಘಟನಾ ಸ್ಥಳಕ್ಕೆ ಮೃತನ ತಾಯಿ ಸೇರಿ ನಾಲ್ವರು ಕುಟುಂಬ ಸದಸ್ಯರು ತಲುಪಿದರು. ಮೃತ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್. ಹಾಗೂ ಮೃತ ಯೋಗೇಶ್ ಪತ್ನಿ ಪ್ರತಿಭಾಳ ತಾಯಿ ಪ್ರೇಮಾ ಹಾಗೂ ಪ್ರತಿಭಾಳ ಸಹೋದರ ಗಣೇಶ ಘಟನಾ ಸ್ಥಳ ಅಮೆರಿಕಾದ ಮೇರಿಲ್ಯಾಂಡ ರಾಜ್ಯದ ಬಾಲ್ಟಿಮೋರ್ ತಲುಪಿದರು. ನಂತರ ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ ಅಂತ್ಯಸಂಸ್ಕಾರ ನೆರವೇರಿದೆ. ಭಾರತರದಿಂದ ತೆರಳಿದ ಮೃತರ ನಾಲ್ಕು ಜನ ಕುಟುಂಬ ಸದಸ್ಯರು ಹಾಗೂ ಅಮೆರಿಕಾದಲ್ಲಿಯೇ ಇರುವ ಓರ್ವ ಸೋಮಶೇಖರ ಎಂಬ ಸಂಬಂಧಿಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿತು.
ಸಾಪ್ಟವೇರ್ ಇಂಜಿನೀಯರ್ ಯೋಗೇಶ್ ಆಗಸ್ಟ್ 15ರ ರಾತ್ರಿ ಪತ್ನಿ ಹಾಗೂ ಪುತ್ರನನ್ನ ಗುಂಡು ಹಾರಿಸಿ ಹತ್ಯೆ ಮಾಡಿ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪ್ರಾರ್ಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೇಕಲ್ಲು ಮೂಲದ ಟೆಕ್ಕಿ ಯೋಗೇಶ್ ಹೊನ್ನಾಳ್(37), ಪತ್ನಿ ಪ್ರತಿಭಾ ಹೊನ್ನಾಳ್(35), ಪುತ್ರ ಯಶ್ ಹೊನ್ನಾಳ್(6) ಮೃತಪಟ್ಟವರು.