ಮಹಿಳಾ ರಾಜಕಾರಣಿಗಳ ಬಗ್ಗೆ ಅವಹೇಳನಕಾರಿ ಬರಹ: ವಿಶ್ವೇಶ್ವರ ಭಟ್ ವಿರುದ್ಧ ಪ್ರಕರಣ ದಾಖಲು

Prasthutha|

ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮೋಟಮ್ಮ, ಮಮತಾ ಬ್ಯಾನರ್ಜಿ ಸೇರಿದಂತೆ ಮಹಿಳಾ ರಾಜಕಾರಣಿಗಳ ಹಾಗೂ ಮಹಿಳಾ ಲೇಖಕಿಯರ ಕುರಿತು ಅವಹೇಳನಕಾರಿ ಲೇಖನ ಬರೆದ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾನೂನು ವಿಭಾಗದ ಉಪಾಧ್ಯಕ್ಷರಾದ ವಕೀಲ ಮಂಜುನಾಥ ನಾಯಕ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಶ್ವೇಶ್ವರ ಭಟ್ ಅಗಸ್ಟ್ 20 ರಂದು ಮಾಡಿದ್ದ ಫೇಸ್ಬುಕ್ ಪೋಸ್ಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಮೋಟಮ್ಮ, ಮಮತಾ ಬ್ಯಾನರ್ಜಿಯವರ ಬಗ್ಗೆ ಅವಹೇಳನಕಾರಿ ಹಾಗೂ ಅಸಹ್ಯಕಾರಿ ಪೋಸ್ಟ್ ಮಾಡಿದ್ದರು.


ಮಹಿಳೆಯರ ಬಿಗಿ ಉಡುಪಿನ ಬಗ್ಗೆ ಲೇಖನ ಬರೆದಿದ್ದ ವಿಶ್ವೇಶ್ವರ್ ಭಟ್, ಖ್ಯಾತ ಹಾಲಿವುಡ್ ನಟಿ ಮರ್ಲಿನ್ ಮನ್ರೋ ಹೇಳಿದ ಒಂದು ಮಾತು ನೆನಪಾಗುತ್ತಿದೆ- Your clothes should be tight enough to show you are a teenage girl but loose enough to show you are a lady. ಹೆಣ್ಣು ಮಕ್ಕಳು ಯಾವ ಡ್ರೆಸ್ಸನ್ನೂ ಬಹಳ ದಿನಗಳ ಕಾಲ ಇಷ್ಟಪಡುವುದಿಲ್ಲ. ಅಂದರೆ ಟೈಟ್ ಡ್ರೆಸ್ಸನ್ನು ಯಾವತ್ತೂ ಧರಿಸುವುದಿಲ್ಲ. ಆಗೊಮ್ಮೆ ಈಗೊಮ್ಮೆ ಧರಿಸಿದಾಗ ಮನೆಯಲ್ಲಿ ಸದನ ಸದೃಶ ವಾತಾವರಣ ನಿರ್ಮಿಸಬಾರದು, ಕೆಲ ದಿನಗಳ ಬಳಕ ಮಗಳಿಗೆ ನೀವು ಅಂಥ ಡ್ರೆಸ್ ಧರಿಸು ಅಂದರೂ ಧರಿಸುವುದಿಲ್ಲ. ಅಷ್ಟಕ್ಕೂ ಆ ವಯಸ್ಸಿನ ಮಕ್ಕಳು ಟೈಟ್ ಡ್ರೆಸ್ ಧರಿಸಿದರೇ ಚೆಂದ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್, ಮೋಟಮ್ಮ, ಮಮತಾ ಬ್ಯಾನರ್ಜಿ ಅಂಥ ಡ್ರೆಸ್ ಧರಿಸಿದರೆ ಬರಿಗಣ್ಣಿನಿಂದ ನೋಡಲು ಸಾಧ್ಯವಾ ? ಒಮ್ಮೆ ಯೋಚಿಸಿ ಎಂದು ಪೋಸ್ಟ್ ಮಾಡಲಾಗಿದೆ.

- Advertisement -


ವಿಶ್ವೇಶ್ವರ ಭಟ್ ತನ್ನ ಬರಹದಲ್ಲಿ ಮಹಿಳೆಯರ ಬಗ್ಗೆ, ಮಹಿಳೆಯರ ದೇಹದ ಬಗ್ಗೆ, ಉಡುಗೆಯ ಹಾಗೂ ಅವರ ಘನತೆಗೆ ಕುಂದಾಗುವಂತೆ ಅವಹೇಳನಕಾರಿಯಾಗಿ ಬರೆದಿದ್ದು ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹರಡಿದೆ. ಆದ್ದರಿಂದ ವಿಶ್ವೇಶ್ವರ ಭಟ್ ಮೇಲೆ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಆಗ್ರಹಿಸಲಾಗಿದೆ.



Join Whatsapp