ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ –ಟಿಎಂಸಿ ಪಕ್ಷದ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿದೆ. ಸೋಮವಾರ ಡೈಮಂಡ್ ಹಾರ್ಬರ್ ಕ್ಷೇತ್ರದ ಶಾಸಕ ದೀಪಕ್ ಹಲ್ದಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರು ಬಿಜೆಪಿ ಪಾಳಯ ಸೇರುವ ಬಗ್ಗೆ ಇನ್ನೂ ಯಾವುದೇ ಸೂಚನೆ ನೀಡಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಟಿಎಂಸಿಯ ರಜಿಬ್ ಬ್ಯಾನರ್ಜಿ ಪಕ್ಷ ತೊರೆದಿದ್ದರು.
ಟಿಎಂಸಿಯಿಂದ ಹೊರಹೋಗಿರುವ ಹಲ್ದಾರ್ ಅವರು “ಜನಸಾಮಾನ್ಯರಿಗೆ ಕೆಲಸ ಮಾಡಲು ಪಕ್ಷದಲ್ಲಿ ಅವಕಾಶ ನೀಡಿಲ್ಲ” ಎಂದು ಪಕ್ಷದ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ 2017 ರಿಂದಲೂ ತಮಗೆ ಜನಸಾಮಾನ್ಯರ ಪರವಾಗಿ ಸರಿಯಾಗಿ ಕೆಲಸ ಮಾಡಲು ಅವಕಾಶ ನೀಡಿಲ್ಲ. ನಾಯಕತ್ವಕ್ಕೆ ಮಾಹಿತಿ ನೀಡಿದ್ದರೂ ಪರಿಸ್ಥಿತಿಯನ್ನು ಸುಧಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮದ ಬಗ್ಗೆ ತಮಗೆ ಮಾಹಿತಿ ನೀಡುತ್ತಿಲ್ಲ. ಕ್ಷೇತ್ರದ ಜನರಿಗೆ ಮತ್ತು ಬೆಂಬಲಿಗರಿಗೆ ನಾನು ಉತ್ತರದಾಯಿಯಾಗಿದ್ದೇನೆ. ಹಾಗಾಗಿ ಪಕ್ಷವನ್ನು ತ್ಯಜಿಸಲು ನಿರ್ಧರಿಸಿದ್ದೇನೆ. ನನ್ನ ರಾಜೀನಾಮೆಯನ್ನು ಶೀಘ್ರದಲ್ಲೇ ಜಿಲ್ಲಾ ಮತ್ತು ರಾಜ್ಯಾಧ್ಯಕ್ಷರಿಗೆ ಕಳುಹಿಸುತ್ತೇನೆ ಎಂದು ದೀಪಕ್ ಹಲ್ದಾರ್ ತಿಳಿಸಿದ್ದಾರೆ.
ರಜಿಬ್ ಬ್ಯಾನರ್ಜಿಯಲ್ಲದೆ, ಬೈಶಾಲಿ ದಾಲ್ಮಿಯಾ (ಹೌರಾದ ಬ್ಯಾಲಿ ಕ್ಷೇತ್ರದ ಟಿಎಂಸಿ ಶಾಸಕ) ಮತ್ತು ಪ್ರಬೀರ್ ಘೋಸಲ್ (ಹೂಗ್ಲಿಯ ಉತ್ತರಪಾರದ ತೃಣಮೂಲ ಶಾಸಕ) ಅವರು ಕೂಡ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದ್ದಾರೆ. ಈಗಾಗಲೇ ಕೆಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರೆ, ಇನ್ನು ಕೆಲವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಇದೇ ವರ್ಷದ ಏಪ್ರಿಲ್ –ಮೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.
ಮುಂದುವರಿದ ರಾಜೀನಾಮೆ ಪರ್ವ; ಮತ್ತೋರ್ವ ತೃಣಮೂಲ ಕಾಂಗ್ರೆಸ್ ಶಾಸಕ ರಾಜೀನಾಮೆ
Prasthutha|