ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಆಗ್ರಹಿಸಿದೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಪಕ್ಷದ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಕೋವಿಡ್-19 ಸಾಂಕ್ರಾಮಿಕದ ನಂತರ ಹಂತ-ಹಂತವಾಗಿ ಶಿಕ್ಷಣ ಸಂಸ್ಥೆಗಳು ಪುನಃ ಆರಂಭವಾಗುತ್ತಿವೆ. ರಾಜ್ಯ ಸರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶುಲ್ಕಗಳನ್ನು ರಿಯಾಯಿತಿ ದರದಲ್ಲಿ ಮಾತ್ರ ವಸೂಲಿ ಮಾಡಲು ನಿರ್ದೇಶನ ನೀಡಿರುವುದು ಸ್ವಾಗತಾರ್ಹ. ಆದರೆ ಎಲ್.ಕೆ.ಜಿಯಿಂದ ಉನ್ನತ ದರ್ಜೆಯವರೆಗೆ ಶಿಕ್ಷಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಪೊರೇಟ್ ರೀತಿಯ ಲಾಭಕೋರ ಉದ್ಯಮವನ್ನಾಗಿ ಮಾರ್ಪಡಿಸಿದೆ. ಈ ಖಾಸಗಿ ಸಂಸ್ಥೆಗಳು ಡೊನೇಷನ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡುತ್ತಿವೆ. ಕೆಲವು ಸಂಸ್ಥೆಗಳು ರಜಾ ಅವಧಿಗಳಲ್ಲಿ ತಮ್ಮ ಶಿಕ್ಷಕರಿಗೆ ಸಂಬಳವನ್ನೂ ನೀಡಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಸಿಬ್ಬಂದಿಗೆ ಸೇವಾ ಭದ್ರತೆಯೂ ಕಲ್ಪಿಸುವಲ್ಲಿ ಖಾಸಗಿ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ ಎಂದು ಅವರು ದೂರಿದ್ದಾರೆ.
ಶುಲ್ಕಕ್ಕಾಗಿ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಪೀಡಿಸಲಾಗುತ್ತಿದೆ. ಕೆಲವು ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಕೆಲವು ರಾಜಕಾರಣಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಾಭ ಮಾಡಲು ಸರ್ಕಾರದ ಮೇಲೆ ತನ್ನ ಪ್ರಭಾವ ಬೀರುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಯನ್ನು ತುರ್ತಾಗಿ ಸರಕಾರ ಸರಿಪಡಿಸಬೇಕೆಂದು ಅಶ್ರಫ್ ಮಾಚಾರ್ ಆಗ್ರಹಿಸಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಎಸ್.ಡಿ.ಪಿ.ಐ ಆಗ್ರಹ
Prasthutha|