ಗಂಭೀರ ಅನಾರೋಗ್ಯ ಪೀಡಿತರಾದ ತಾಯಿ ನೋಡಲು ಜಾಮೀನು ನೀಡುವಂತೆ ಸಿದ್ದೀಕ್ ಕಪ್ಪನ್ ಪರ ಸುಪ್ರೀಂ ಕೋರ್ಟ್ ಗೆ ಮನವಿ
Prasthutha|
ಲಖನೌ : ಗಂಭೀರ ಅನಾರೋಗ್ಯ ಪೀಡಿತರಾಗಿರುವ ತಮ್ಮ 90 ವರ್ಷದ ತಾಯಿಯನ್ನು ನೋಡಲು ಅವಕಾಶವಾಗುವಂತೆ ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಜಾಮೀನು ನೀಡುವಂತೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗಾರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ತಮ್ಮ ತಾಯಿ ಜೊತೆ ಸಿದ್ದೀಕ್ ವೀಡಿಯೊ ಕಾಲ್ ನಲ್ಲಿ ಮಾತನಾಡಲು ಯತ್ನಿಸಿದ್ದರು. ಆದರೆ, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದರಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ.
ಕಪ್ಪನ್ ಮತ್ತು ಅವರ ತಾಯಿಯ ನಡುವೆ ಒಂದು ಬಾರಿ ವೀಡಿಯೊ ಕಾಲ್ ಮಾಡಿ ಮಾತನಾಡಲು ಸುಪ್ರೀಂ ಕೋರ್ಟ್ ಜ.22ರಂದು ಅವಕಾಶ ನೀಡಿತ್ತು.
ಕಪ್ಪನ್ ಅವರ ತಾಯಿ ಅನಿಯಂತ್ರಿತ ಡಯಾಬಿಟಿಸ್ ನಿಂದ ಬಳಲುತ್ತಿದ್ದು, ಆಹಾರ ತೆಗೆದುಕೊಳ್ಳುವುದು ಕಡಿಮೆ ಮಾಡಿದ್ದಾರೆ ಎಂಬ ಮಾಹಿತಿಯುಳ್ಳ ವೈದ್ಯಕೀಯ ಪ್ರಮಾಣ ಪತ್ರವನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ.
ಹಥ್ರಾಸ್ ದಲಿತ ಯುವತಿಯ ಭೀಕರ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಕಠಿಣ ಯುಎಪಿಎ ಕಾನೂನಿನಡಿ ಪ್ರಕರಣ ದಾಖಲಿಸಿರುವುದರಿಂದ, ಅವರು ಜೈಲಿನಲ್ಲಿದ್ದಾರೆ.