ಟೊರೊಂಟೊ: ಏಕದಿನ ಕ್ರಿಕೆಟ್ನಲ್ಲಿ ಬರೋಬ್ಬರಿ 515 ರನ್ ಬಾರಿಸಿ ಯುಎಸ್ಎ ಅಂಡರ್ 19 ತಂಡ ಹೊಸ ಇತಿಹಾಸ ನಿರ್ಮಿಸಿದೆ. ಟೊರೊಂಟೊ ಕ್ರಿಕೆಟ್ ಕ್ಲಬ್ನಲ್ಲಿ ನಡೆದ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಅಮೆರಿಕಾಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಈ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ಪಂದ್ಯದಲ್ಲಿ ಯುಎಸ್ಎ U-19 ಹಾಗೂ ಅರ್ಜೆಂಟೀನಾ U-19 ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಅರ್ಜೆಂಟೀನಾ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಇತ್ತ ಇನಿಂಗ್ಸ್ ಆರಂಭಿಸಿದ ಪ್ರಣವ್ ಚೆಟ್ಟಿಪಾಳ್ಯಂ ಹಾಗೂ ಭವ್ಯ ಮೆಹ್ತಾ ಯುಎಸ್ಎ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. 43 ಎಸೆತಗಳನ್ನು ಎದುರಿಸಿದ ಪ್ರಣವ್ 10 ಫೋರ್ಗಳೊಂದಿಗೆ 61 ರನ್ಗಳಿಸಿ ಔಟಾದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದ ಭವ್ಯ ಮೆಹ್ತಾ 91 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 136 ರನ್ ಬಾರಿಸಿ ರನೌಟ್ ಆದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಿ ರಮೇಶ್ ಕೇವಲ 59 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಸ್ಪೋಟಕ ಶತಕ ಸಿಡಿಸಿದರು. ಹಾಗೆಯೇ ಅರ್ಜುನ್ ಮಹೇಶ್ 67 ರನ್ಗಳ ಕೊಡುಗೆ ನೀಡಿದರೆ, ಅಮೋಘ್ ಅರೆಪಲ್ಲಿ 48 ರನ್ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಉತ್ಕರ್ಷ್ ಶ್ರೀವಾಸ್ತವ 22 ಎಸೆತಗಳಲ್ಲಿ 40 ರನ್ ಚಚ್ಚಿದರು. ಈ ಮೂಲಕ ಯುಎಸ್ಎ ಅಂಡರ್-19 ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 515 ರನ್ ಕಲೆಹಾಕಿತು.
516 ರನ್ಗಳ ಕಠಿಣ ಗುರಿ ಪಡೆದ ಅರ್ಜೆಂಟೀನಾ ಪರ ಥಿಯೋ ವ್ರೂಗ್ಡೆನ್ಹಿಲ್ 18 ರನ್ ಬಾರಿಸಿದರೆ, ಫೆಲಿಪೆ ನೆವೆಸ್ 15 ರನ್ ಕಲೆಹಾಕಿದರು. ಇತ್ತ ಯುಎಸ್ಎ ಪರ ಕರಾರುವಾಕ್ ದಾಳಿ ಸಂಘಟಿಸಿದ ಆರಿನ್ ನಾಡಕರ್ಣಿ 6 ಓವರ್ಗಳಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಉರುಳಿಸಿದರು.
ಪರಿಣಾಮ ಅರ್ಜೆಂಟೀನಾ ಅಂಡರ್-19 ತಂಡ 19.5 ಓವರ್ಗಳಲ್ಲಿ ಕೇವಲ 65 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಯುಎಸ್ಎ ಅಂಡರ್-19 ತಂಡ 450 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ವಿಶ್ವ ದಾಖಲೆ ಬರೆದ ಅಮೆರಿಕದ ಯುವ ಕ್ರಿಕೆಟಿಗರು:
ಈ ಪಂದ್ಯದಲ್ಲಿ 515 ರನ್ ಬಾರಿಸುವ ಮೂಲಕ ಯುಎಸ್ಎ ಅಂಡರ್-19 ತಂಡ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.
ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ 498 ರನ್ಗಳು. 2022 ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ತಂಡ ಈ ವಿಶ್ವ ದಾಖಲೆ ಬರೆದಿದ್ದರು. ಇದೀಗ ಯುಎಸ್ಎ ಕಿರಿಯರ ತಂಡ 515 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ.