ಉಡುಪಿ: ಮಂಗಳೂರು ಕಾಲೇಜಿನ ವೈದ್ಯರ ತಂಡ ತೆರಳುತ್ತಿದ್ದ ಕಾರು ತಡೆದು ಸಂಘಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಲ್ಪಾಡಿ ಗ್ರಾಮದ ಬಳಿ ನಡೆದಿದೆ.
ಈ ಸಂಬಂಧ ಕಾರ್ಕಳ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಬಂಧಿತ ಆರೋಪಿಗಳು.
ಮಂಗಳೂರಿನ ಹೆಸರಾಂತ ಕಾಲೇಜಿನ ವೈದ್ಯರ ತಂಡ ಕಾರಿನಲ್ಲಿ ಶೃಂಗೇರಿಗೆ ತೆರಳಿ ಕಾರ್ಕಳದ ಕುಂಟಲ್ಪಾಡಿ ಮೂಲಕ ಮಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಆರೋಪಿಗಳು, ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಕಾರನ್ನು ಹಿಂಬಾಲಿಸಿ ಕುಂಟಲ್ಪಾಡಿ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ವಿಭಿನ್ನ ಕೋಮಿಗೆ ಸೇರಿದವರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೂಗಾಡಿದ್ದಾರೆ. ಕಾರಿನಲ್ಲಿದ್ದ ಮಹಿಳೆ ಕೂಡಲೇ ನೇರವಾಗಿ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮಾಹಿತಿ ಆಧರಿಸಿ ಕೂಡಲೇ ಸ್ಥಳಕ್ಕೆ ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜೆ, ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್, ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.