ಸಂಭಾವನೆ ಇಲ್ಲದೆ ನಂದಿನಿ ಬ್ರ್ಯಾಂಡ್ ರಾಯಭಾರಿ: ತ್ಯಾಗವಲ್ಲ, ಕರ್ತವ್ಯ ಎಂದ ಶಿವರಾಜ್ ಕುಮಾರ್

Prasthutha|

ಬೆಂಗಳೂರು: ರಾಜ್ಯದ ಹೆಮ್ಮೆಯ ಬ್ರ್ಯಾಂಡ್​ ಆಗಿರುವ ನಂದಿನಿಗೆ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ ಅವರನ್ನು ಕೆಎಂಎಫ್ ಆಯ್ಕೆ ಮಾಡಿದೆ. ಈ ಹೊಸ ಜವಾಬ್ದಾರಿ ಕುರಿತಾಗಿ ನಟ ಶಿವರಾಜ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

- Advertisement -

“ನಮ್ಮ ಕುಟುಂಬಕ್ಕೆ ಮತ್ತೊಮ್ಮೆ ಈ ಅವಕಾಶ ಬಂದಿರುವುದಕ್ಕೆ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ನಂದಿನಿ ರಾಯಭಾರಿ ಆಗಿರುವ ಬಗ್ಗೆ ಬಹಳ ಖುಷಿ ಇದೆ. ಕೆಎಂಎಫ್ ನಮ್ಮ ಕುಟುಂಬ ಮೇಲಿಟ್ಟಿರುವ ಗೌರವದ ಬಗ್ಗೆ ಖುಷಿ ಇದೆ. ಇದು ರೈತರಿಗೆ ಸಂಬಂಧಿಸಿದ ವಿಷಯ, ರೈತರಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ಬಗ್ಗೆ ಇನ್ನೂ ಹೆಚ್ಚಿನ ಖುಷಿ ಇದೆ. ರೈತರಿಗೆ ಏನು ಮಾಡಬೇಕಿದೆಯೋ ಅದನ್ನು ಮಾಡಲೇ ಬೇಕು” ಎಂದಿದ್ದಾರೆ ಶಿವರಾಜ್ ಕುಮಾರ್.

ನಂದಿನಿ ಉತ್ಪನ್ನಗಳಿಗೆ ಅದರದ್ದೇ ಆದ ಬೇಡಿಕೆ ಇದೆ. ಈಗಾಗಲೇ ದೇಶದಾದ್ಯಂತ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿವೆ. ಆ ಬೇಡಿಕೆಯನ್ನು ಜೆನ್ಯೂನ್ ಆಗಿ ಹೆಚ್ಚಳ ಮಾಡುವ ಪ್ರಯತ್ನ ಆಗಬೇಕಿದೆ. ಫೋಟೊ ಕೊಡೋದು, ಜಾಹೀರಾತು ಶೂಟಿಂಗ್​ನಲ್ಲಿ ಭಾಗವಹಿಸುವುದು ಮಾತ್ರವೇ ಅಲ್ಲದೆ ಅವಕಾಶ ಸಿಕ್ಕಾಗಲೆಲ್ಲ ಕೆಎಂಎಫ್​ಗೆ ಪ್ಲ್ಯಾಂಟ್​ಗಳಿಗೆ ಭೇಟಿ ನೀಡುವ ಯೋಚನೆಯೂ ನನಗೆ ಇದೆ. ನಮ್ಮ ಮನೆಯಲ್ಲೂ ನಂದಿನಿ ತುಪ್ಪ ಬಳಸುತ್ತೇವೆ, ಮನೆಯ ಬಳಿಯೇ ಒಂದು ಪಾರ್ಲರ್ ಸಹ ಇದೆ” ಎಂದಿದ್ದಾರೆ.

- Advertisement -

“ಮೊದಲ ಬಾರಿಗೆ ಅಪ್ಪಾಜಿಯವರು ಕೆಎಂಎಫ್ ಪರವಾಗಿ ಕಾರ್ಯಕ್ರಮ ಮಾಡಿದಾಗ ವೇದಿಕೆಯಲ್ಲಿ ನಾನೂ ಇದ್ದೆ. ಅಂದು ನಂದಿನಿ ಹಾಲು ಕುಡಿದು ಬಹಳ ಚೆನ್ನಾಗಿದೆ ಎಂದು ನನಗೂ ಕುಡಿಯಲು ನೀಡಿದ್ದರು ಅದು ಚೆನ್ನಾಗಿ ನೆನಪಿದೆ. ಇತ್ತೀಚೆಗೆ ಆ ವಿಡಿಯೋ ವೈರಲ್ ಆಗಿತ್ತು. ಜನ, ಸರ್ಕಾರಗಳು ನಮ್ಮ ಮೇಲಿಟ್ಟಿರುವ ಪ್ರೀತಿಯಿಂದ ನಂದಿನಿ ಪ್ರಾಡೆಕ್ಟ್​ನ ರಾಯಭಾರಿ ಆಗುವ ಅವಕಾಶ ಪದೇ-ಪದೇ ನಮಗೆ ಸಿಗುತ್ತಿದೆ. ಜಾಹೀರಾತು ಶೂಟ್ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಚಿತ್ರೀಕರಣ ಆಗಲಿದೆ” ಎಂದರು ಶಿವಣ್ಣ.

ಅಪ್ಪು ಹಾಗೂ ಅಪ್ಪಾಜಿ ರೀತಿಯಲ್ಲಿಯೇ ಸಂಭಾವನೆ ಪಡೆಯದೇ ನಂದಿನಿ ಪ್ರಾಡೆಕ್ಟ್​ನ ರಾಯಭಾರಿ ಆಗುತ್ತಿರುವ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ”ಸಂಭಾವನೆ ಇಲ್ಲದೆ ರಾಯಭಾರಿ ಆಗಿರುವುದು ದೊಡ್ಡ ತ್ಯಾಗ ಏನೂ ಅಲ್ಲ. ಅದು ನಾವು ಮಾಡಬೇಕಾದ ಕರ್ತವ್ಯ. ಏಕೆಂದರೆ ಇದು ರೈತರ ವಿಷಯ. ಸಂಭಾವನೆ ಎಲ್ಲ ಇಲ್ಲಿ ವಿಷಯ ಅಲ್ಲ. ರೈತರ ವಿಷಯ ಬಂದಾಗ ಮುಂದೆ ನಿಂತು ಕೆಲಸ ಮಾಡಬೇಕು, ಅದು ತ್ಯಾಗ ಎಂದೇನೂ ಅಲ್ಲ” ಎಂದಿದ್ದಾರೆ ಶಿವರಾಜ್ ಕುಮಾರ್.

ಕೆಎಂಎಫ್​ನ ನಂದಿನಿ ಉತ್ಪನ್ನಗಳಿಗೆ ಮೊದಲಿಗೆ ಡಾ. ರಾಜ್​ಕುಮಾರ್ ಅವರು ಪ್ರಚಾರ ರಾಯಭಾರಿ ಆಗಿದ್ದರು. ಆ ನಂತರ ಪುನೀತ್ ರಾಜ್​ಕುಮಾರ್ ಅವರು ರಾಯಭಾರಿ ಆಗಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ರಾಯಭಾರಿ ಆಗಿದ್ದಾರೆ.



Join Whatsapp