ಹೊಸದಿಲ್ಲಿ: ಜನಾಂಗೀಯ ಸಂಘರ್ಷದ ಕುಲುಮೆಯಲ್ಲಿ ಬೇಯುತ್ತಿರುವ ಮಣಿಪುರಕ್ಕೆ ಇಂದು(ಶನಿವಾರ) ವಿರೋಧ ಪಕ್ಷಗಳ ಸಂಸದರ ನಿಯೋಗ ಭೇಟಿ ನೀಡಲಿದೆ. 16 ಪಕ್ಷಗಳ 20 ಸಂಸದರು ನಿಯೋಗದಲ್ಲಿದ್ದು ಜನರನ್ನು ಭೇಟಿಯಾಗಿ ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ.
ಈ ಬಗ್ಗೆ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಸಂಸದ ಡಾ. ನಾಸೀರ್ ಹುಸೇನ್, ಶನಿವಾರ ಬೆಳಗ್ಗೆ ಸಂಸದರ ನಿಯೋಗ ಮಣಿಪುರಕ್ಕೆ ತೆರಳಲಿದ್ದು, ಹಿಂಸಾಚಾರದಿಂದ ಹಾನಿಗೊಳಗಾದ ಗುಡ್ಡಗಾಡು ಪ್ರದೇಶಗಳು ಮತ್ತು ಕಣಿವೆಗಳಿಗೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಕ್ರಮವಾಗಿ 184 ಮತ್ತು 267 ನಿಯಮಗಳ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡದೆ ಭಾರತೀಯ ಜನತಾ ಪಕ್ಷವು ಹಠಮಾರಿ ವರ್ತನೆ ತೋರುತ್ತಿದ್ದು, ಪ್ರತಿಪಕ್ಷಗಳ ನಿರಂತರ ಒತ್ತಾಯದ ಬಳಿಕವೂ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನೊಳಗೆ ಮಾತನಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ನಿಯೋಗದಲ್ಲಿ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಲಾಲನ್ ಸಿಂಗ್, ಎಂಎಸ್ ಸುಶ್ಮಿತಾ ದೇವ್, ಎಂಎಸ್ ಕನಿಮೋಳಿ ಕರುಣಾನಿಧಿ, ಸಂತೋಷ್ ಕುಮಾರ್, ಎಎ ರಹೀಮ್, ಪ್ರೊ. ಮನೋಜ್ ಕುಮಾರ್ ಝಾ, ಜಾವೇದ್ ಅಲಿ ಖಾನ್, ಮಹುವಾ ಮಜಿ, ಪಿಪಿ ಮೊಹಮ್ಮದ್ ಫೈಜಲ್, ಅನೀಲ್ ಪ್ರಸಾದ್ ಹೆಗ್ಡೆ, ಇಟಿ ಮೊಹಮ್ಮದ್ ಬಶೀರ್, ಎನ್ಕೆ ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಅರವಿಂದ್ ಸಾವಂತ್, ಡಿ ರವಿಕುಮಾರ್, ತಿರು ತೋಲ್ ತಿರುಮಾವಳವನ್, ಜಯಂತ್ ಸಿಂಗ್ ಮತ್ತು ಎಂಎಸ್ ಫುಲೋ ದೇವಿ ನೇತಮ್ ಇರಲಿದ್ದಾರೆ ಎಂದು ಅವರು ತಿಳಿಸಿದರು.