ಬೆಂಗಳೂರು: ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಮಣಿಪುರಕ್ಕೆ ಹೋಗದ ಮಹಿಳಾ ಆಯೋಗ ಉಡುಪಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ನಡೆದಿರುವ ನೇತ್ರ ಜ್ಯೋತಿ ಕಾಲೇಜಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರಂ ಭೇಟಿ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ. ಜಿ. ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಉಡುಪಿಯಲ್ಲಿ ವಿಡಿಯೋ ಚಿತ್ರೀಕರಣ ಮಕ್ಕಳ ಆಟ ಅಂತಾ ಹೇಳಿಲ್ಲ. ಸ್ನೇಹಿತರ ಮಧ್ಯೆ ಘಟನೆಗಳು ನಡೆಯುತ್ತೆ, ಅದು ಅಲ್ಲಿಗೆ ಮುಗಿಯುತ್ತೆ. ಪ್ರಕರಣದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತಾರೆ.
ಈಗಾಗಲೇ ಸಸ್ಪೆಂಡ್ ಮಾಡಿದ್ದಾರೆ, ಹೆಚ್ಚಿನ ಕ್ರಮ ಅವರಿಗೆ ಬಿಟ್ಟಿದ್ದು. ನಾವು ಇದಕ್ಕೆ ಮಧ್ಯಪ್ರವೇಶಿಸಲ್ಲ, ಅವರೇ ದೂರು ದಾಖಲಿಸುತ್ತಾರೆ. ಈಗಾಗಲೇ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಎಲ್ಲವೂ ಹೊರಬರಲಿದೆ ಎಂದಿದ್ದಾರೆ.