ನವದೆಹಲಿ : ತಮ್ಮ ಅಂಕಲ್ ಅಶೋಕ್ ಕುಮಾರ್ ಕುಟುಂಬದ ಮೇಲೆ ದರೋಡೆಕೋರರೆನ್ನಲಾದ ಗುಂಪಿನಿಂದ ಇತ್ತೀಚೆಗೆ ನಡೆದ ಮಾರಣಾಂತಿಕ ದಾಳಿಯ ಬಗ್ಗೆ ಖ್ಯಾತ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಮೌನ ಮುರಿದಿದ್ದು, ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಕೆಲವು ದಿನಗಳ ಹಿಂದೆ 58 ವರ್ಷದ ಅಶೋಕ್ ಕುಮಾರ್ ಮತ್ತು ಕುಟುಂಬದ ಮೇಲೆ ದಾಳಿ ನಡೆದಿತ್ತು. ದಾಳಿಯಲ್ಲಿ ಅಶೋಕ್ ಕುಮಾರ್ ಸಾವಿಗೀಡಾಗಿದ್ದರು. ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೂ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದೀಗ ಮಕ್ಕಳಲ್ಲಿ ಒಬ್ಬರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದು, ಈ ಬಗ್ಗೆ ಸುರೇಶ್ ರೈನಾ ಟ್ವೀಟ್ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪಂಜಾಬ್ ನಲ್ಲಿ ನನ್ನ ಕುಟುಂಬದ ಮೇಲೆ ನಡೆದಿರುವ ದಾಳಿ ಭಯಾನಕವಾದುದು. ನನ್ನ ಅಂಕಲ್ ರನ್ನು ಹತ್ಯೆ ಮಾಡಲಾಗಿದೆ. ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಗಂಭೀರ ಗಾಯಗಳಾಗಿವೆ. ದುರದೃಷ್ಟಕರವೆಂದರೆ, ಮಕ್ಕಳಲ್ಲಿ ಒಬ್ಬರು ಹಲವು ದಿನಗಳಿಂದ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸಿ, ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
ಇಲ್ಲಿ ವರೆಗೂ ಆ ರಾತ್ರಿ ನಿಜವಾಗಿ ಏನು ನಡೆದಿತ್ತು ಎಂಬುದು ನಮಗೆ ತಿಳಿದಿಲ್ಲ. ಪಂಜಾಬ್ ಪೊಲೀಸರು ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಕನಿಷ್ಟಪಕ್ಷ ನಮಗೆ ಈ ಅಮಾನವೀಯ ಕೃತ್ಯವನ್ನು ಎಸಗಿದವರು ಯಾರು ಎಂಬುದನ್ನು ತಿಳಿಯಬೇಕು. ಆ ಕ್ರಿಮಿನಲ್ ಗಳು ಇನ್ನೂ ಹೆಚ್ಚಿನ ಅಪರಾಧಗಳನ್ನು ಎಸಗುವುದಕ್ಕೆ ಬಿಡಬಾರದು ಎಂದು ರೈನಾ ಟ್ವೀಟ್ ಮಾಡಿದ್ದಾರೆ.
ಆ19-20ರ ರಾತ್ರಿ ಪಂಜಾಬ್ ನ ಪಠಾಣ್ ಕೋಟ್ ಜಿಲ್ಲೆಯ ಥರಿಯಾಲ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ದರೋಡೆಕೋರರು ಮಾರಕಾಸ್ತ್ರಗಳಿಂದ ಅಶೋಕ್ ಕುಮಾರ್ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿತ್ತು.