ಟೋಲ್‌ ಹೆಚ್ಚಳ ವಿರೋಧಿಸಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ರಸ್ತೆ ತಡೆ

Prasthutha|

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅವೈಜ್ಞಾನಿಕವಾಗಿ ಹಾಗೂ ಸೂಚನೆಯಿಲ್ಲದೆಯೇ ಟೋಲ್‌ ಹೆಚ್ಚಿಸಿರುವುದನ್ನು ವಿರೋಧಿಸಿ ಇಂದು ರಸ್ತೆ ತಡೆಗೆ ಕನ್ನಡಪರ ಸಂಘಟನೆಗಳು ಮುಂದಾಗಿವೆ.

- Advertisement -

ಇಂದು ಬೆಳಿಗ್ಗೆ 10 ಗಂಟೆಗೆ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಪ್ರತಿಭಟನೆ ನಡೆಯಲಿದ್ದು, ಕಣಮಿಣಿಕಿ ಟೋಲ್ ಬಳಿ ಎರಡೂ ಬದಿ ರಸ್ತೆಯನ್ನು ಕನ್ನಡಪರ ಸಂಘಟನೆಗಳು ತಡೆಯಲಿವೆ. ಟೋಲ್ ದರ ಕಡಿಮೆ ಮಾಡುವಂತೆ ಒಂದು ವಾರ ಗಡುವು ನೀಡಲಾಗಿತ್ತು. ಆದರೆ ಕನ್ನಡಪರ ಸಂಘಟನೆಗಳ ಎಚ್ಚರಿಕೆಗೆ ಹೆದ್ದಾರಿ ಪ್ರಾಧಿಕಾರ ಕ್ಯಾರೇ ಎಂದಿಲ್ಲ.

ಟೋಲ್‌ ದರ ಏಕಾಏಕಿ ಹಾಗೂ ಅವೈಜ್ಞಾನಿಕವಾಗಿ ಹೆಚ್ಚಿಸಲಾಗಿದೆ. ಇದನ್ನು ಇಳಿಸಬೇಕು. ಎಕ್ಸ್‌ಪ್ರೆಸ್‌ವೇಯಲ್ಲಿ ಮೂಲಭೂತ ಸೌಕರ್ಯ ಕೊರತೆಯಿದೆ ಹಾಗೂ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸಮಸ್ಯೆ ಬಗೆಹರಿಸದೆ ಸುಂಕ ವಸೂಲಿ ಹೆಚ್ಚಿಸಲಾಗಿದೆ ಎಂದು ಕನ್ನಡಪರ ಸಂಘಟನೆಗಳು ಹೆದ್ದಾರಿ ಪ್ರಾಧಿಕಾರ ವಿರುದ್ಧ ಪ್ರತಿಭಟನೆ ಆಯೋಜಿಸಿವೆ.

- Advertisement -

ಒಂದು ತಿಂಗಳ ಹಿಂದೆ ಸದ್ದಿಲ್ಲದೆ ಎಕ್ಸ್‌ಪ್ರೆಸ್‌ವೇ ಟೋಲ್ ದರವನ್ನು ಹೆದ್ದಾರಿ ಪ್ರಾಧಿಕಾರ ಹೆಚ್ಚಳ ಮಾಡಿತ್ತು. ಶೇ.22ರಷ್ಟು ಟೋಲ್ ದರ ಏರಿಕೆ ಮಾಡಲಾಗಿದ್ದು, ಜೂನ್ 1ರಿಂದಲೇ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಫಾಸ್ಟ್ ಟ್ಯಾಗ್ ಇರುವ ಕಾರಣ ಟೋಲ್‌ ದರ ಏರಿಕೆ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಕಾರು, ವ್ಯಾನ್‌, ಜೀಪ್‌ಗಳಿಗೆ 30 ರೂಪಾಯಿ, ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ 50 ರೂಪಾಯಿ, ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ಬರೋಬ್ಬರಿ 105 ರೂಪಾಯಿ ಹೆಚ್ಚಳ ಮಾಡಲಾಗಿದೆ.

Join Whatsapp