ನೂತನ ಶಾಸಕರಿಗೆ ತರಬೇತಿ ನೀಡಲು ಬಲಪಂಥೀಯರಿಗೆ ಆಹ್ವಾನ: ಖಾದರ್‌ ಗೆ ಕಾಂಗ್ರೆಸ್ ನಾಯಕ ರಮೇಶ್ ಬಾಬು ಪತ್ರ

Prasthutha|

ಬೆಂಗಳೂರು: ಹೊಸದಾಗಿ ಈ ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ತರಬೇತಿ ನೀಡುವುದಕ್ಕಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಮ್ಮಿಕೊಂಡಿರುವ ಮೂರು ದಿನಗಳ ತರಬೇತಿ ಶಿಬಿರಕ್ಕೆ ಕರೆಸಲಾಗುತ್ತಿರುವ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಒಂದು ಸಿದ್ಧಾಂತಕ್ಕೆ ಅಂಟಿಕೊಂಡವರಿಗೆ ಸ್ಪೀಕರ್ ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಿಬಿರಕ್ಕೆ ಕರೆಸಲಾಗುತ್ತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಮರು ಪರಿಶೀಲಿಸುವಂತೆ ಆಗ್ರಹ ವ್ಯಕ್ತವಾಗಿದೆ.

- Advertisement -

ಶಿಬಿರದ ವಿಚಾರವಾಗಿ ಸ್ಪೀಕರ್ ಯುಟಿ ಖಾದರ್​​ಗೆ ಕಾಂಗ್ರೆಸ್ ನಾಯಕ, ಮಾಜಿ ಎಂಎಲ್ಸಿ ರಮೇಶ್ ಬಾಬು ಪತ್ರ ಬರೆದಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ತರಬೇತಿ ಶಿಬಿರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ, ಮೊಹಮ್ಮದ್ ಕುಂಞ, ಗುರುರಾಜ್ ಕರ್ಜಗಿ, ರವಿಶಂಕರ್ ಗುರೂಜಿ ಅವರನ್ನು ಯುಟಿ ಖಾದರ್ ಆಯ್ಕೆ ಮಾಡಿದ್ದಾರೆ.

- Advertisement -

ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆ ಆರಂಭವಾಗಿದ್ದು, ಅನೇಕರು ರಾಜಕೀಯ ಮತ್ತು ಆಡಳಿತಾತ್ಮಕ ವಿಚಾರಗಳ ಬಗ್ಗೆ ತರಬೇತಿ ನೀಡುವುದಕ್ಕೆ ರಾಜಕಾರಣ ಹಾಗೂ ಆಡಳಿತದಲ್ಲಿ ಮಾಗಿದ ಹಿರಿಯ ರಾಜಕಾರಣಿಗಳು ಸಿಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನೆಲಮಂಗಲದ ಸಮೀಪ ಧರ್ಮಸ್ಥಳ ಕ್ಷೇಮವನದಲ್ಲಿ ನೂತನ ಶಾಸಕರಿಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ. ಜೂನ್ 26ಕ್ಕೆ ಆರಂಭಗೊಂಡು ಜೂನ್ 28ರ ವರೆಗೆ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮಂದಿ ಹಿರಿಯ ರಾಜಕಾರಣಿಗಳೂ ಶಿಬಿರಾರ್ಥಿಗಳ ಜತೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.



Join Whatsapp