-ಎನ್.ರವಿಕುಮಾರ್
ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ಮಾತು ಆಗಾಗ್ಗೆ ಮುನ್ನೆಲೆಗೆ ಬರುತ್ತಲೆ ಇರುತ್ತದೆ. ರಾಜ್ಯವನ್ನಾಳಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಜನವಿರೋಧಿ ಧೋರಣೆಗಳನ್ನು ಜನರು ಅನುಭವಿಸಿದ್ದು ಆಗಿದೆ. ಇವುಗಳ ನಡುವೆ ಸೈದ್ಧಾಂತಿಕ ಸ್ಪಷ್ಟತೆಯೇ ಇಲ್ಲದ ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷದ ಆಡಳಿತದ ಅನುಭವ ಕೂಡ ಜನರಿಗಾಗಿದೆ. ಈ ಮೂರು ಪಕ್ಷಗಳು ರಾಜಕೀಯವಾಗಿ ಭಿನ್ನ ಸಿದ್ಧಾಂತಗಳನ್ನು ಹೊಂದಿವೆ ಎಂದು ಹೇಳಿಕೊಳ್ಳುತ್ತಿದ್ದರಾದರೂ, ಅಧಿಕಾರಕ್ಕೆ ಬಂದಾಗ ಅಂತಹ ಯಾವ ಭಿನ್ನತೆಗಳು ಕಂಡು ಬರುವುದಿಲ್ಲ. ರಾಜಕಾರಣ ವೆಂಬುದು ಅಂತಿಮವಾಗಿ ಜನರಿಂದ, ಜನರಿಗಾಗಿ, ಜನಗಳಿಗೋಸ್ಕರ ಎಂಬ ಧ್ಯೇಯ ಮರೆತ ಅಧಿಕಾರದ ಬೇಟೆಯ ಅಸ್ತ್ರದಂತಾಗಿದೆ. ಇಂತಹ ಹೊತ್ತಿನಲ್ಲಿ ರಾಜ್ಯಕ್ಕೊಂದು ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ ಎಂಬ ಚರ್ಚೆಗಳು ಮತ್ತು ಆ ದಿಕ್ಕಿನಲ್ಲಿ ಸಣ್ಣ ಪ್ರಯತ್ನಗಳಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಚೋದನಾತ್ಮಕ ಯಶಸ್ಸು ಸಿಕ್ಕಿದೆ.
ಏನಿದು ಪರ್ಯಾಯ ರಾಜಕಾರಣ?
ಕರ್ನಾಟಕದಲ್ಲಿ ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರು ಪಕ್ಷಗಳ ಯಾದಿಯಲ್ಲಿ ರಾಜಕಾರಣ ಗಿರಿಕಿ ಹೊಡೆಯುತ್ತಿದೆ. ಈ ಮೂರು ಪಕ್ಷಗಳು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮತ್ತು ಸೈದ್ಧಾಂತಿಕವಾಗಿಯೂ ಬದ್ಧತೆಯನ್ನು ಉಳಿಸಿಕೊಂಡಿಲ್ಲ. ಇವುಗಳ ಹೊರತಾಗಿ ಬಿಎಸ್ಪಿ, ಆಪ್, ಸಿಪಿಐ(ಎಂ), ಎಸ್ ಡಿಪಿಐ, ಸ್ವರಾಜ್ ಇಂಡಿಯಾ, ರೈತಸಂಘ-ಹಸಿರು ಸೇನೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಂತಹ ಪಕ್ಷಗಳು ಕೂಡ ಇವೆ. ಜಡ್ಡು ಗಟ್ಟಿರುವ ರಾಜ್ಯ ರಾಜಕಾರಣವನ್ನು ಜನಪರವಾಗಿ ಚಲನಶೀಲಗೊಳಿಸುವ ನಿಟ್ಟಿನಲ್ಲಿ ರೈತ ಸಂಘಗಳನ್ನು ಒಳಗೊಂಡಿರುವ ಸ್ವರಾಜ್ ಇಂಡಿಯಾ, ಆಪ್, ಎಸ್ ಡಿಪಿಐನಂತಹ ಪಕ್ಷಗಳು ಬೇರು ಮಟ್ಟದ ರಾಜಕಾರಣಕ್ಕೆ ಇಳಿದಿವೆ. ರಾಜಕಾರಣವೆಂದರೆ ಕೇವಲ ಚುನಾವಣೆಯಷ್ಟೇ ಅಲ್ಲ. ಅದು ಸಂವಿಧಾನದ ಮೂಲತತ್ವಗಳ ಅನುಷ್ಠಾನದ ಬಹುಮುಖ್ಯ ಮಾಧ್ಯಮ ಎಂಬುದನ್ನು ಮನಗಂಡು ಜನಪರ ರಾಜಕಾರಣಕ್ಕಿಳಿದಿವೆ. ಇದನ್ನೆ ಪರ್ಯಾಯ ರಾಜಕಾರಣವೆಂದೂ ಕರೆಯಬಹುದು. ಇಂತಹ ಪರ್ಯಾಯ ರಾಜಕಾರಣಕ್ಕೆ ಮೊನ್ನೆಯಷ್ಟೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆರಂಭಿಕ ಯಶಸ್ಸು ಸಿಕ್ಕಿರುವುದು ಆಶಾದಾಯಕ ಬೆಳವಣಿಗೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮುಂಚೂಣಿಯ ಪಕ್ಷಗಳಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ತಮ್ಮ ಸಾಧನೆಯನ್ನು ಎದೆ ತಟ್ಟಿಹೇಳಿಕೊಳ್ಳುತ್ತಿವೆ. ಗ್ರಾಮ ಪಂಚಾಯತ್ ಚುನಾವಣೆಗಳು ರಾಜಕೀಯ ಪಕ್ಷಗಳ ಹೊರತಾಗಿದ್ದರೂ, ರಾಜಕೀಯ ಪಕ್ಷಗಳ ಬೆಂಬಲಿತವಾಗಿ ಹುರಿಯಾಳುಗಳು ಗುರುತಿಸಲ್ಪಡುವುದು ಇದ್ದೇ ಇದೆ. ಆದರೆ ಈ ಬಾರಿ ನಡೆದ ಚುನಾವಣೆ ಅಕ್ಷರಶಃ ರಾಜಕೀಯ ಪಕ್ಷಗಳ ನೆಲೆಯಲ್ಲೇ ನಡೆದಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳ ಮಾದರಿಯಂತೆ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ದುಡ್ಡು, ಹೆಂಡ ಕೆಲಸ ಮಾಡಿದೆ. ಅದಕ್ಕಿಂತ ಅಪಾಯಕಾರಿಯಾದದ್ದು ಎಂದು ಅದು ಬಿಜೆಪಿ ಬಿತ್ತುತ್ತಿರುವ ಕೋಮು ರಾಜಕಾರಣ ಹಳ್ಳಿಗಳಲ್ಲಿನ ಸೌಹಾರ್ದತೆಯನ್ನು, ಸಹಬಾಳ್ವೆಯನ್ನು ಹದಗೆಡಿಸುತ್ತಿದೆ. ಗ್ರಾಮ ಪಂಚಾಯತ್ ಎಂಬ ಬೇರು ಮಟ್ಟದಿಂದಲೇ ಪಕ್ಷ ರಾಜಕಾರಣವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಶಕ್ತಾನುಸಾರ ದುಡಿದಿವೆ. ರಾಜ್ಯದ ಒಟ್ಟು 30 ಜಿಲ್ಲೆಗಳ 5762 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ತಮ್ಮದೇ ಮೇಲುಗೈ ಎಂದು ಹೇಳಿಕೊಳ್ಳುತ್ತಿದ್ದರೂ, ವಾಸ್ತವಾಗಿ ಆಡಳಿತಾರೂಢ ಬಿಜೆಪಿ ಆಡಳಿತ ವಿರೋಧಿ ಅಲೆಯಿಂದ ಹಿನ್ನಡೆ ಸಾಧಿಸಿದೆ. ಅದೇ ಕಾಲಕ್ಕೆ ಕಾಂಗ್ರೆಸ್ ತಮ್ಮದೇ ಬಲವಿದೆ ಎಂದು ಹೇಳಿಕೊಂಡಿದೆ. ಶೇ.60ರಷ್ಟು ಸದಸ್ಯರು ಕಾಂಗ್ರೆಸ್ ಬೆಂಬಲದಲ್ಲಿ ಗೆದ್ದಿದ್ದಾರೆ ಎಂದು 2015ರ ಚುನಾವಣೆಯ ಸಾಧನೆಯನ್ನು ಉಳಿಸಿಕೊಂಡ ತಪ್ತಿಯಲ್ಲಿದೆ. ಜೆಡಿಎಸ್ ಹಳೆ ಮೈಸೂರು ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಂತೆ ಕಂಡರೂ ಈ ಮೂರು ಪಕ್ಷಗಳಿಗೆ ಎದಿರೇಟು ಕೊಟ್ಟಂತೆ ಎಸ್ಡಿಪಿಐ, ಸ್ವರಾಜ್ ಇಂಡಿಯಾ, ಬಿಎಸ್ಪಿಮತ್ತು ಸಿಪಿಐ(ಎಂ) ಪಕ್ಷಗಳು ಸಾಧನೆಗೈದಿರುವುದು ಮುಂಚೂಣಿ ಪಕ್ಷಗಳ ನಿದ್ದೆಗೆಡಿಸಿದೆ.
ಸ್ವರಾಜ್ ಇಂಡಿಯಾ, ರೈತಸಂಘ- ಹಸಿರುಸೇನೆಯ ಸಂಘಟಿತ ರಾಜಕೀಯದ ಪರಿಣಾಮ ಗ್ರಾಮ ಪಂಚಾಯತ್ ಕಣಕ್ಕೆ 3000 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳು ಸೇರಿದಂತೆ ಒಟ್ಟು 1900ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಮಂಡ್ಯ, ಮೈಸೂರು ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿಯುವಷ್ಟು ಶಕ್ತಿಯನ್ನು ಹೊಂದಿವೆ. ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತನ್ನ ಪ್ರಭಾವವನ್ನು ವೃದ್ಧಿಸಿಕೊಂಡಿರುವ ಎಸ್ ಡಿಪಿಐ ರಾಜ್ಯಾದ್ಯಂತ 225ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ. ಮತ್ತೂ ಬಹುತೇಕ ಗ್ರಾಮ ಪಂಚಾಯತ್ ನಲ್ಲಿ ಅಧಿಕಾರ ಯಾರ ಪಾಲಾಗಬೇಕೆಂಬ ನಿರ್ಧಾರದ ಮೂರನೇ ಶಕ್ತಿಯಾಗಿ ಬೆಳೆದಿದೆ. ಸಿಪಿಐ(ಎಂ), ಡಿವೈಎಫ್, ಎಸ್ ಎಫ್ ಐ ಸಂಯುಕ್ತ ಹೋರಾಟದಿಂದ 231 ಅಭ್ಯರ್ಥಿಗಳು, ಸಿಪಿಐ 17, ಡಬ್ಲೂಪಿಐ 43, ಆಪ್ 286, ಬಿಎಸ್ಪಿ 236, ಹುರಿಯಾಳುಗಳು ಗೆದ್ದು ಈ ಪಕ್ಷಗಳು ನಿರ್ಣಾಯಕ ಸ್ಥಾನದಲ್ಲಿವೆ. ಈ ಸಣ್ಣ ಪಕ್ಷಗಳ ಸ್ಪರ್ಧೆ ಮತ್ತು ಹೋರಾಟ ಕಾಂಗ್ರೆಸ್-ಬಿಜೆಪಿಗೆ ನುಂಗಲಾರದ ತುತ್ತಾಗಿ ಹಿನ್ನಡೆಗೆ ಕಾರಣವಾಗಿರುವುದನ್ನು ಅಲ್ಲೆಗೆಳೆಯಲಾಗದು. ಈ ಫಲಿತಾಂಶ ರಾಜ್ಯದ ಪರ್ಯಾಯ ರಾಜಕಾರಣಕ್ಕೆ ಬರೆದ ಮುನ್ನುಡಿಯಾಗಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ವಿರಾಟ ಗೆಲುವು ಸಾಧಿಸಲಾಗದ ಬಿಜೆಪಿ ಹಳ್ಳಿಗಳಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಅಲೆಗೆ ಬೆಚ್ಚಿಬಿದ್ದಿದೆ. ‘ಆಪರೇಶನ್ ಕಮಲ’ದಂತಹ ಅನೈತಿಕ ರಾಜಕಾರಣವನ್ನು ಹುಟ್ಟು ಹಾಕಿ ಅದರಿಂದಲೆ ಅಧಿಕಾರ ಹಿಡಿದಿರುವ ಬಿಜೆಪಿ ಎಲ್ಲಾ ಹಂತದಲ್ಲೂ ಆಪರೇಶನ್ ಕಮಲ ಮೂಲಕ ಅಧಿಕಾರ ಹಿಡಿಯುವುದ ಕುತಂತ್ರವನ್ನು ಮುಂದುವರೆಸಿದೆ. ಗ್ರಾಮ ಪಂಚಾಯತ್ ಗಳನ್ನು ತಮ್ಮ ವಶಕ್ಕಿಟ್ಟುಕೊಳ್ಳಲೇಬೇಕೆಂದು ಹೊರಟಿರುವ ಬಿಜೆಪಿ ಈಗ ಅನ್ಯಪಕ್ಷಗಳಿಂದ ಗೆದ್ದ ಅಭ್ಯರ್ಥಿಗಳನ್ನು ದುಡ್ಡು, ಅಧಿಕಾರ ಆಮಿಷದಿಂದ ಸೆಳೆಯುವ ಕೆಲಸಕ್ಕೆ ಮುಂದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈಗಾಗಲೆ ಹಾಳುಗೆಡವಿರುವ ಬಿಜೆಪಿಗೆ ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಆಶಯದ ಸಣ್ಣ ಪಕ್ಷಗಳೇ ನಿದ್ದೆಗೆಡಿಸಿದೆ. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮಹತ್ವದ್ದಾಗಿದ್ದು, ಮತೀಯ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವುದು ಎಲ್ಲಾ ಕಾಲದ ತುರ್ತು ಕೆಲಸವಾಗಿದೆ.
ರಾಜ್ಯದಲ್ಲಿ ಅಧಿಕಾರರೂಢ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ, ಆಡಳಿತ ವೈಫಲ್ಯಗಳು ಜನರನ್ನು ಬಾಧಿಸಿವೆ. ಕೊರೋನ ಸಂಕಷ್ಟವನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವುದು ಕಣ್ಣಿಗೆ ಕಟ್ಟಿದೆ. ಕೃಷಿ ಕಾಯ್ದೆ ತಿದ್ದುಪಡಿ, ಗೋಹತ್ಯೆ ನಿಷೇಧ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಮತ್ತು ಲವ್ ಜಿಹಾದ್ ನಂತಹ ಕಾಯ್ದೆಗಳ ಮೂಲಕ ಜನರ ಪಾಲಿಗೆ ಕಂಟಕವಾಗಿವೆ. ಮತೀಯ ರಾಷ್ಟ್ರೀಯವಾದ, ಪೊಳ್ಳು ದೇಶಭಕ್ತಿ ಕೇಕೆಯಿಂದಾಗಿ ಜನರನ್ನು ಒಡೆದು ಆಳಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಬಿಜೆಪಿಯೇತರ ಪರ್ಯಾಯ ರಾಜಕಾರಣವೆಂಬುದೇ ಒಂದು ಪರಿಹಾರ ಎಂಬುದನ್ನು ಜನತೆ ಅರಿತುಕೊಳ್ಳಬೇಕು.