ಬೆಂಗಳೂರು: ವಿಶ್ವಕ್ಕೆ ಭಾರತದ ಕೊಡುಗೆಯಾದ ಯೋಗ ಸಮಾಜದ ಆರೋಗ್ಯಕ್ಕೆ ಅತಿ ಮುಖ್ಯವಾದದ್ದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಆಯುಷ್ ಇಲಾಖೆ ಆಯೋಜಿಸಿದ್ದ ಯೋಗ ವಸದೈವ ಕುಟುಂಬಕ್ಕಾಗಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಆರೋಗ್ಯ ವೃದ್ಧಿಗಾಗಿ ಯೋಗಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಗುಂಡೂರಾವ್ ಹೇಳಿದರು.
ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳನ್ನ ವ್ಯಕ್ತಪಡಿಸಿದ ಗುಂಡೂರಾವ್, ಯೋಗ ನಮ್ಮ ದೇಶದ ಸಂಸ್ಕೃತಿ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಇಡೀ ವಿಶ್ವಕ್ಕೆ ಯೋಗವನ್ನ ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಯೋಗ ದಿನನಿತ್ಯದ ನಮ್ಮ ಮಾನಸಿಕ ಆರೋಗ್ಯಕ್ಕೂ ಬಹಳ ಮುಖ್ಯ ಎಂದರು. ಮಾನವನಲ್ಲಿ ಚುರುಕು, ಉತ್ಸಹ, ದೈಹಿಕ ಹಾಗೂ ಮಾನಸಿಕ ಶುದ್ದಿಕರಣ ಯೋಗದಿಂದ ಸಿಗಲಿದೆ. ಇವತ್ತಿನ ದಿನಗಳಲ್ಲಿ ಮಧುಮೇಹ, ಬಿಪಿ, ಕ್ಯಾನ್ಸರ್, ಹಾರ್ಟ್ ಅಟ್ಯಾಕ್ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಲೈಫ್ ಸ್ಟೈಲ್. ಯಾರು ಯೋಗ ಅಭ್ಯಾಸ ಮಾಡ್ತಾರೆ ಅವರಿಗೆ ಆರೋಗ್ಯ ಚೆನ್ನಾಗಿರಲಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದ್ದು, ಶಾಲೆಗಳಿಂದಲೇ ಎಲ್ಲಾ ಕಡೆ ಯೋಗಭ್ಯಾಸಕ್ಕೆ ಪ್ರೋತ್ತಾಹ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದಾಗಿ ಗುಂಡೂರಾವ್ ತಿಳಿಸಿದ್ದಾರೆ. ಅಷ್ಟಾಂಗ ಯೋಗದಲ್ಲ, ನೈರ್ಮಲ್ಯ ಶುಚಿತ್ವಕ್ಕೂ ಒತ್ತು ನೀಡಲಾಗಿದೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ.
ಆರೋಗ್ಯದ ಹಲವು ಸಮಸ್ಯೆಗಳಗೆ ಯೋಗಾಭ್ಯಾಸದಿಂದ ಉತ್ತಮ ಪರಿಹಾರ ಒದಗಿಸಬಹುದು ಎಂಬುದನ್ನು ಸಂಶೋಧನೆಗಳಿಂದ ದೃಢಪಟ್ಟಿರುತ್ತದೆ. ಈ ನಿಟ್ಟನಲ್ಲಿ ರಾಜ್ಯದಲ್ಲಿ ಈಗಾಗಲೇ 376 ಆಯುಷ್ ಆರೋಗ್ಯ ಕ್ಷೇಮ ಕೇಂದ್ರಗಳು ಹಾಗೂ ಆರೋಗ್ಯ ಇಲಾಖೆಯಿಂದ 7,270 ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಪ್ರತಿನಿತ್ಯ ಒಂದು ಗಂಟೆಗಳ ಕಾಲ ಉಚಿತವಾಗಿ ನುರಿತ ಯೋಗ ಶಿಕ್ಷಕರಿಂದ ಯೋಗ ತರಗತಿಗಳು ನಡೆಯುತ್ತಿದ್ದು, ಜನರು ಇದರ ಪ್ರಯೋಜನ ಪಡೆಯುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಕರೆ ನೀಡಿದರು.