ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆ

Prasthutha|

ಬೆಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ರವರ  ಅಧ್ಯಕ್ಷತೆಯಲ್ಲಿ ಜೂನ್ 18ರಂದು ಬೆಂಗಳೂರಿನಲ್ಲಿ ನಡೆಯಿತು.

- Advertisement -

ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಗಿನಂತಿವೆ

1.ಗ್ಯಾರಂಟಿ ಯೋಜನೆ: ಅನುಷ್ಠಾನದ ಆರ್ಥಿಕ ನಷ್ಟಕ್ಕೆ ಮದ್ಯ ಮಾರಾಟ ಗುರಿ ಹೆಚ್ಚಿಸುವುದು ಅವೈಜ್ಞಾನಿಕ

- Advertisement -

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಎದುರಾಗಬಹುದಾದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಮದ್ಯ ಮಾರಾಟದ ಗುರಿ ಹೆಚ್ಚಿಸಲು ಸರ್ಕಾರ ಚಿಂತನ ನಡೆಸುತ್ತಿದೆ ಎಂಬ ಬಗ್ಗೆ ವರದಿಯಾಗಿದೆ. ಈ ಚಿಂತನೆಯು ಅವೈಜ್ಞಾನಿಕವಾಗಿದ್ದು ಇದನ್ನು ಸಭೆಯು ಖಂಡಿಸುತ್ತದೆ. ಮದ್ಯ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಮಾನಸಿಕ,ಬೌದ್ಧಿಕ ,ಕೌಟುಂಬಿಕ,ಸಾಮಾಜಿಕ ಅಧಃಪತನಕ್ಕೆ ಕಾರಣವಾಗಿದೆ. ಮದ್ಯದ ಅಮಲಿನಲ್ಲಿ ಮಹಿಳಾ ದೌರ್ಜನ್ಯವೂ ಸೇರಿದಂತೆ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಇದನ್ನು ಒಂದು ಸಾಮಾಜಿಕ ಪಿಡುಗು ಎಂದು ಪರಿಗಣಿಸಿ ಸಂಪೂರ್ಣ ಅಮಲು ಪದಾರ್ಥಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕಾಗಿದ್ದ ಸರ್ಕಾರ ಮದ್ಯ ಮಾರಾಟ ಹೆಚ್ಚಿಸಲು ಚಿಂತನೆ ನಡೆಸುತ್ತಿರುವುದು ಸೂಕ್ತವಲ್ಲ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ಸಮಾಜಮುಖಿ ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಬೇಕೆಂದು ಸಭೆಯು ಒತ್ತಾಯಿಸುತ್ತದೆ.

2.ಗ್ಯಾರಂಟಿ ಯೋಜನೆ: ಪತಿಯ ಆದಾಯದ ಮಾನದಂಡ ಆಕ್ಷೇಪಾರ್ಹ

 ನೂತನ ಸರಕಾರವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಸ್ವಾಗತಾರ್ಹ. ಆದರೆ ಈ ಯೋಜನೆಗಳಿಗೆ ಷರತ್ತುಗಳನ್ನು ವಿಧಿಸಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ ಈ ಯೋಜನೆಗಳನ್ನು ನಿರಾಕರಿಸಿರುವುದು ವಿಷಾದನೀಯ. ಮಹಿಳೆಯರಿಗೆ ಸಿಗಬೇಕಾದ ಯೋಜನೆಯ ಅರ್ಹತೆಗೆ ಪತಿಯ ಆದಾಯವನ್ನು ಮಾನದಂಡವಾಗಿಸಿರುವುದು ಆಕ್ಷೇಪಾರ್ಹ. ಇದು  ಮಹಿಳೆಯರು ಪತಿಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯನ್ನು  ಎತ್ತಿ ಹಿಡಿದಿದೆ. ಆದ್ದರಿಂದ ಯೋಜನೆಗಳ ಷರತ್ತುಗಳನ್ನು ಕೈಬಿಟ್ಟು ಪ್ರತಿಯೊಬ್ಬ ಮಹಿಳೆಯರಿಗೂ ಯೋಜನೆಗಳನ್ನ ಮುಕ್ತವಾಗಿಸಬೇಕೆಂದು ವಿಮೆನ್ ಇಂಡಿಯ ಮೂವ್ಮೆಂಟ್ ರಾಜ್ಯ ಸಮಿತಿ ಸಭೆಯು ಒತ್ತಾಯಿಸುತ್ತದೆ.

3.ಆಡಳಿತದಲ್ಲೂ ಶೇಕಡಾ 50 ಮೀಸಲಾತಿ ಮಹಿಳೆಯರಿಗೆ ನೀಡಲು ಸರಕಾರಕ್ಕೆ ಒತ್ತಾಯ

ಮಹಿಳೆಯರು ಮತದಾನದ ಹಕ್ಕನ್ನು ಚಲಾಯಿಸಿ ಜನಪ್ರತಿನಿಧಿಗಳನ್ನು ಆರಿಸುವಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ. ಆದರೆ ಪ್ರಸ್ತುತ ವಿಧಾನಸಭೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಬರೀ 11. ಅದರಲ್ಲೂ ಅಹಿಂದ ವರ್ಗದ ಮಹಿಳೆಯರಿಗೂ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ದೊರಕಲು ಒಳಮೀಸಲಾತಿಯನ್ನೂ ಒಳಗೊಂಡಂತೆ ವಿಧಾನಸಭೆಯಲ್ಲಿ ಶೇಕಡಾ 50 ರಷ್ಟು ಮೀಸಲಾತಿ ಮಹಿಳೆಯರಿಗೆ ನೀಡಿ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಸಭೆಯು ಸರಕಾರವನ್ನು ಒತ್ತಾಯಿಸುತ್ತದೆ.

4.ಹಿಜಾಬ್ ಧಾರಣೆ: ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಿ

ಫ್ಯಾಸಿಸ್ಟ್ ಸರ್ಕಾರ ಜಾರಿಗೆ ತಂದಿರುವ ದ್ವೇಷಪೂರಿತ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಸುತ್ತಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಅಂತೆಯೇ ಕಳೆದ ಬಾರಿ ಪಿ.ಯು ಬೋರ್ಡ್ ಹೊರಡಿಸಿದ ಮಾರ್ಗಸೂಚಿಯ ಕಾರಣದಿಂದ ಹಲವಾರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಲಾಗದೆ ಶಿಕ್ಷಣದಿಂದ ವಂಚಿತರಾಗಿ ತಮ್ಮ ಸಾಂವಿಧಾನಿಕ ವಸ್ತ್ರಧಾರಣೆಯ  ಹಕ್ಕನ್ನು  ಕಳೆದುಕೊಂಡಿದ್ದಾರೆ. ಇದು ಮಹಿಳೆಯರ ಒಟ್ಟು ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ. ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ಅಸಂವಿಧಾನಿಕ ಕಾಯ್ದೆಗಳನ್ನು ಪುನರ್ ಪರಿಶೀಲಿಸುತ್ತಿರುವ ಈ ಸಂದರ್ಭದಲ್ಲಿ ಆದ್ಯತೆಯ ಮೇರೆಗೆ ಸರ್ಕಾರವು ಈ ಸಮಸ್ಯೆಯನ್ನು ಕೈಗೆತ್ತಿಕೊಂಡು ಮಹಿಳಾ ಶಿಕ್ಷಣಕ್ಕೆ ಅನುವು ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ..



Join Whatsapp