ಬೆಂಗಳೂರು : ಆರ್ ಆರ್ ನಗರದ 118 ಕೋಟಿ ನಕಲಿ ಬಿಲ್ ಪಾವತಿ ಹಗರಣದಲ್ಲಿ ಶಾಸಕ ಮುನಿರತ್ನ ರವರ ಪಾತ್ರದ ಬಗ್ಗೆ ತನಿಖೆ ನಡೆಸಲು ಕೂಡಲೇ ಶಾಸಕರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಇಂದಿಲ್ಲಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೋಹನ್ ದಾಸರಿ 2008 ರಿಂದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ ಇಷ್ಟೆಲ್ಲ ಕೋಟ್ಯಾಂತರ ರೂಪಾಯಿಗಳ ಬಾನಗಡಿಯ ಹಿಂದೆ ನೇರ ಪಾತ್ರವಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಶಾಸಕರ ನೇರ ಹಸ್ತಕ್ಷೇಪವಿಲ್ಲದೆ ಕೇವಲ ಅಧಿಕಾರಿಗಳು ಮಾತ್ರ ಇಷ್ಟೆಲ್ಲ ಹಗರಣಗಳು ಮಾಡಲು ಸಾಧ್ಯವಿಲ್ಲ.
ಈ ಹಿಂದೆ ಲೋಕಾಯುಕ್ತ ವರದಿಯಲ್ಲಿ ಶಾಸಕ ಮುನಿರತ್ನ ಹೆಸರು ಕೈ ಬಿಟ್ಟಿರುವುದರ ಹಿಂದೆ ಸಹ ಈ ಹಿಂದಿನ ಬಿಜೆಪಿ ಸರ್ಕಾರದ ನೇರ ಷಡ್ಯಂತರವಿತ್ತು. ಈ ಹಗರಣದ ಹಿಂದೆ ಮುನಿರತ್ನ ಕೈವಾಡವಿದೆಯೆಂದು ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಈ ಹಿಂದೆ ಆಮ್ ಆದ್ಮಿ ಪಕ್ಷವು ಒತ್ತಾಯಿಸಿತ್ತು.
ನೂತನ ಕಾಂಗ್ರೆಸ್ ಸರ್ಕಾರವು ಕೇವಲ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ಪ್ರಕರಣವನ್ನು ತಿಪ್ಪೆ ಸಾರಿಸುವ ಕೆಲಸ ಮಾಡಬಾರದು. ಶಾಸಕ ಮುನಿರತ್ನ ರವರನ್ನು ಬಿಜೆಪಿಯವರಂತೆ ರಕ್ಷಿಸುವುದನ್ನು ಬಿಟ್ಟು ಕೂಡಲೆ ಬಂಧಿಸಿ ವಿಚಾರಣೆ ಗುಣಪಡಿಸಬೇಕೆಂದು ಮೋಹನ್ ದಾಸರಿ ಒತ್ತಾಯಿಸಿದರು.