ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ. ಸೂರ್ಯ ಬಂಧನ

Prasthutha|

ಚೆನ್ನೈ: ಕೆಲವು ದಿನಗಳ ಹಿಂದೆ ಮಧುರೈ ಸಂಸದ ಸು ವೆಂಕಟೇಶನ್ ವಿರುದ್ಧ ಟ್ವೀಟ್ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್ ಜಿ ಸೂರ್ಯ ಅವರನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.

- Advertisement -

ಮಲದಿಂದ ತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸಿದ ನಂತರ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಕ್ಕೆ ವೆಂಕಟೇಶನ್ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿ ಸೂರ್ಯ ಟ್ವೀಟ್‌ನಲ್ಲಿ ಆರೋಪಿಸಿದ್ದರು. ಸಂಸದ ವೆಂಕಟೇಶನಿಗೆ ಬರೆದ ಪತ್ರದಲ್ಲಿ ಸೂರ್ಯ ಘಟನೆಯನ್ನು ತೀವ್ರವಾಗಿ ಟೀಕಿಸಿದ್ದರು.
“ನಿಮ್ಮ ಪ್ರತ್ಯೇಕತಾವಾದದ ನಕಲಿ ರಾಜಕೀಯವು ಆ ಮೋರಿಗಿಂತ ಕೆಟ್ಟದಾಗಿ ಗಬ್ಬು ನಾರುತ್ತಿದೆ, ಮನುಷ್ಯನಾಗಿ ಬದುಕುವ ಮಾರ್ಗವನ್ನು ಕಂಡುಕೊಳ್ಳಿ, ಎಂದು ಸೂರ್ಯ ಟ್ವೀಟ್ ಮಾಡಿದ್ದರು. ಇದು ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ.


ಬಂಧನವನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ‘ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ. ಸೂರ್ಯ ಅವರನ್ನು ಬಂಧಿಸಿರುವುದು ತೀವ್ರ ಖಂಡನೀಯ. ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಕಮ್ಯುನಿಸ್ಟ್ ಪಕ್ಷದ ಇಬ್ಬಗೆಯ ನೀತಿಯನ್ನು ಬಯಲು ಮಾಡಿದ್ದೇ ಸೂರ್ಯ ಮಾಡಿದ ಏಕೈಕ ತಪ್ಪು. ಈ ರೀತಿಯ ಬಂಧನಗಳಿಂದ ನಮ್ಮನ್ನು ತಡೆಯಲಾಗದು. ಇಂತಹ ಕಹಿ ಸತ್ಯಗಳನ್ನು ಹೇಳುವುದನ್ನು ಮುಂದುವರಿಸುತ್ತೇವೆ’ ಎಂದಿದ್ದಾರೆ.



Join Whatsapp