ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್

Prasthutha|

ಹೊಸದಿಲ್ಲಿ: ಕರ್ನಾಟಕ ಸರ್ಕಾರದಿಂದ ಬಡ ಜನರಿಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಇದನ್ನೆಲ್ಲ ನೋಡಿಕೊಂಡು ರಾಜ್ಯದ ಪರ ಧ್ವನಿ ಎತ್ತದೆ ಸುಮ್ಮನೆ ಕುಳಿತಿರುವ ಬಿಜೆಪಿಯ 25 ಸಂಸದರು ದಂಡಪಿಂಡಗಳು ಎಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ನವದೆಹಲಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಡಿದ್ದ ಮಾತನ್ನು ಸಾಬೀತು ಮಾಡಿದ್ದಾರೆ. ಬಿಜೆಪಿಗೆ ಮತ ಹಾಕದಿದ್ದರೇ ಪರೋಕ್ಷವಾಗಿ ಕೇಂದ್ರದ ಯೋಜನೆಗಳನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದರು. ಅದನ್ನು ಈಗ ಮಾಡುತ್ತಿದ್ದಾರೆ ಎಂದಿದ್ದಾರೆ.

ಆದರೆ ಕರ್ನಾಟಕದ 25 ಸಂಸದರು ಏನು ಮಾಡುತ್ತಿದ್ದಾರೆ ಎನ್ನುವುದು ನನ್ನ ಪ್ರಶ್ನೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಪ್ರತಿ ಬಾರಿ ಅನ್ಯಾಯವಾದಾಗಲೂ ಮೌನವಾಗಿದ್ದಾರೆ. ರಾಜ್ಯದ ಪರ ಧ್ವನಿ ಎತ್ತದ ಬಿಜೆಪಿಯ 25 ಸಂಸದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕುಟುಕಿದ್ದಾರೆ.

- Advertisement -

ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಿಜೆಪಿ ನಾಯಕರಿಗೆ ಭಯವಿದೆ. ಕಾಂಗ್ರೆಸ್ ಯೋಜನೆಗಳು ಯಶಸ್ವಿಯಾದರೆ ಲೋಕಸಭೆಯಲ್ಲಿ ಅವರಿಗೆ ಸೋಲುವ ಭೀತಿ ಇದೆ. ಈ ಹಿನ್ನೆಲೆ ಕಾಂಗ್ರೆಸ್ ಗ್ಯಾರಂಟಿಗಳಿಗೆ ಕೊಕ್ಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ತಿನ್ನುವ ಅಕ್ಕಿಯಲ್ಲಿ ರಾಜಕೀಯ ಮಾಡುವುದು ಬಿಡಬೇಕು. ಇಲ್ಲದಿದ್ದರೆ ವಿಧಾನಸಭೆ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದ ಜನರು ತಕ್ಕ ಶಿಕ್ಷೆ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.



Join Whatsapp