ಬೆಂಗಳೂರು: ಪ್ರಶಾಂತ್ ಸಂಬರ್ಗಿ ವಿರುದ್ಧ ವಂಚನೆ ಆರೋಪದ ಮೇರೆಗೆ ಎಫ್ ಐಆರ್ ದಾಖಲಾಗಿದೆ.
ಉದ್ಯಮಿ ದೇವನಾಥ್ ವೈ.ಕೆ.ಎಂಬುವರು ನೀಡಿದ ದೂರಿನ್ವಯ ಪ್ರಶಾಂತ್ ಸಂಬರ್ಗಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2017ರ ಜುಲೈನಲ್ಲಿ ದೇವನಾತ್ ಅವರು ಸಂಬರಗಿಯಿಂದ ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶ್ಯೂರಿಟಿ ನೀಡಿದ್ದರು. ಬಳಿಕ 2017ರ ಡಿಸೆಂಬರ್ ನಲ್ಲಿ ಪ್ರಶಾಂತ್ ಗೆ ದೇವನಾಥ್ ಹಣ ವಾಪಸ್ ನೀಡಿದ್ದರು. ಆದರೆ ಹೆಚ್ಚಿನ ಬಡ್ಡಿ ಹಣ ನೀಡಬೇಕೆಂದು ಮನೆ ದಾಖಲೆ ನೀಡದೆ ಸಂಬರ್ಗಿ ಸತಾಯಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಠಾಣೆಯಲ್ಲಿ ದೇವನಾತ್ ವಿರುದ್ಧ ಸುಳ್ಳು ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಸದ್ಯ ಸುಳ್ಳು ದೂರು ಹಿನ್ನೆಲೆ ಸಂಬರ್ಗಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.