ಲಕ್ನೋ: ಪೊಲೀಸರ ಮೇಲೆ ಕಿರುಕುಳದ ಆರೋಪವನ್ನು ಮಾಡಿ ಯುಪಿಎಸ್ ಸಿ ಪರೀಕ್ಷೆಯ ತಯಾರಿಯಲ್ಲಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.
ಆಶಿಶ್ ಕುಮಾರ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಯುಪಿಎಸ್ ಸಿ ಪರೀಕ್ಷೆಯ ತಯಾರಿಯಲ್ಲಿದ್ದ ಆಶಿಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಪತ್ರದಲ್ಲಿ ಮೂವರು ಪೊಲೀಸರ ಹೆಸರನ್ನು ಬರೆದಿಟ್ಟಿದ್ದಾನೆ.
ಪ್ರಕರಣವೊಂದರಲ್ಲಿ ಆಶಿಶ್ ಕುಮಾರ್ ಅವರ ಮೇಲೆ ಸುಳ್ಳು ಆಪಾದನೆಯನ್ನು ಮಾಡಿ ಸಿಲುಕಿಸಲಾಗಿದೆ. ಈ ಬಗ್ಗೆ ಆತನಿಗೆ ಮೂವರು ಪೊಲೀಸರು ಕಿರುಕುಳ ನೀಡುತ್ತಿದ್ದರು. ಕಿರುಕುಳದಿಂದ ಬೇಸತ್ತು, ಬೇರೆ ಆಯ್ಕೆಯಿಲ್ಲದೆ ಈ ಹೆಜ್ಜೆಯನ್ನು ಇಟ್ಟಿದ್ದಾನೆ ಎಂದು ಪೊಲೀಸರು ಹೇಳಿರುವುದಾಗಿ ವರದಿ ತಿಳಿಸಿದೆ.